suddibindu.in
Bangalore :ಬೆಂಗಳೂರು: ರಾಮಮಂದಿರ (Ram Mandir) ವಿಚಾರದಲ್ಲಿ ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿಚಾರ ಸಂಬಂಧಿಸಿ ಉತ್ತರಕ‌ನ್ನಡ ಜಿಲ್ಲಾ ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆಗೆ(MP Anantakumar Hegde) ತಾತ್ಕಾಲಿಕ ರಿಲೀಫ್ ದೊರತ್ತಿದ್ದು,ಭಾಷೆ ಪ್ರಯೋಗ ಹಿಡಿತದಲ್ಲಿರಬೇಕೆಂದು ಹೇಳಿದೆ.

ಕುಮಟಾದಲ್ಲಿ ನಡೆದ‌ ಬಿಜೆಪಿ(BJP) ಆಂತರಿಕ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನ ಪದ ಪ್ರಯೋಗ ಸಂಬಂಧಿಸಿ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದಾಗ ತನ್ನ ವಿರುದ್ಧದ ಪ್ರಕರಣಕ್ಕೆ ಸಂಸದರು ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧಿಸಿ ಹೈಕೋರ್ಟ್(High Court) ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆಯವರೆಗೆ ಬಲವಂತದ ಕ್ರಮ ಬೇಡ ಎಂಬ ಆದೇಶ ಹೊರಡಿಸಿದ್ದಾರೆ.

ವಿಚಾರಣೆ ವೇಳೆ ಅನಂತಕುಮಾರ್‌ ಹೆಗಡೆಗೆ ತಿಳಿ ಹೇಳಿದ ಹೈಕೋರ್ಟ್, ಮುಖ್ಯಮಂತ್ರಿ ವಿರುದ್ಧ ಈ ರೀತಿಯ ಪದ ಬಳಕೆ ಮಾಡಬಹುದೇ?. ನಿಮಗೂ ಅವರಿಗೂ ಅಭಿಪ್ರಾಯ ಭೇದವಿರಬಹುದು. ಆದರೆ ಅವರು ರಾಜ್ಯದ ಮುಖ್ಯಮಂತ್ರಿ ಅಲ್ಲವೇ..? ಅವರ ಬಗ್ಗೆ ಈ ರೀತಿಯ ಪದ ಬಳಕೆ ಸರಿಯಲ್ಲ. ಪಿಎಂ, ಸಿಎಂ ( pm,cm) ಹಾಗೂ ಮಂತ್ರಿಗಳಿಗೆ ನಾವು ಗೌರವ ಸಲ್ಲಿಸದಿದ್ದರೆ ಹೇಗೆ..? ಭಾಷೆ ಪ್ರಯೋಗ ಹಿಡಿತದಲ್ಲಿರಬೇಕು ಎಂದು ಹೆಗಡೆಗೆ ನ್ಯಾಯಮೂರ್ತಿಗಳು ಪಾಠ ಮಾಡಿದ್ದಾರೆ.

ನಾವು ಅವರ ಪಾಲಿಸಿ ಇಷ್ಟಪಡಬಹುದು ಅಥವಾ ಇಲ್ಲದಿರಬಹುದು. ಅವರು ನಮ್ಮ ಸಿಎಂ, ಹೀಗೆ ಏಕವಚನದಲ್ಲಿ ಮಾತನಾಡುವುದು ಶೋಭೆ ತರುವ ವಿಚಾರವಲ್ಲ. ಅವರಾಗಲಿ, ನೀವಾಗಲಿ ಏಕವಚನದಲ್ಲಿ ಮಾತನಾಡಬಾರದು. ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಇನ್ನೊಂದು ಪಕ್ಷ ಹೋಗುತ್ತದೆ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹೀಗೆ ಅಲ್ಲವೇ.?.

ಯಾವಾಗಲೂ ಭಾಷೆಯ ಬಳಕೆ ಗೌರವಯುತ ಆಗಿರಬೇಕು. ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಬೇಕೆಂದಾಗ ಮಾತನಾಡಬಾರದು. ನೀವು ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಬೇಕು. ಸ್ವಲ್ಪ ಗಮನ ಇರಲಿ, ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಿ ಎಂದು ಹೆಗಡೆ ಪರ ವಕೀಲರಿಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಸೂಚನೆ ನೀಡಿದ್ದಾರೆ. ಬಳಿಕ ಪ್ರಕರಣ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.