ಸುದ್ದಿಬಿಂದು ಬ್ಯೂರೋ
ಕಾರವಾರ : ಕಳೆದ ವರ್ಷದ ಮಳೆಗಾಲದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಅನೇಕ ಮನೆಗಳು ಕುಸಿದು ಬಿದಿದ್ದವು.ಪ್ರವಾಹದಲ್ಲಿ ಕುಸಿತಕ್ಕೊಳಗಾದ ಮನೆಗಳಿಗೆ ಸರಕಾರದ 5ಲಕ್ಷ ಹಣ ನೀಡುವುದಾಗಿ ಘೋಷಣೆ ಮಾಡಿತ್ತು.ಆದರೆ ಮನೆ ಕುಸಿತವಾಗಿ ತಿಂಗಳೂ ಆರು ಕಳೆದರು ಇನ್ನೂ ಪರಿಹಾರ ನಿರಾಶ್ರಿತರ ಕೈಗೆ ಬಂದಿಲ್ಲ.
ಮನೆ ಕುಸಿತವಾದ ತಕ್ಷಣ ಒಂದು ಲಕ್ಷದಷ್ಟು ಹಣವನ್ನ ನೀಡಿತ್ತು. ನಂತರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾದ ಬಳಿಕ ಹಂತ ಹಂತವಾಗಿ ಹಣ ಮಂಜೂರು ಮಾಡುವುದಾಗಿ ಹೇಳಲಾಗಿತ್ತು. ಆದರೆ ಈಗಾಗಲೇ ಪ್ರವಾಹದಿಂದ ಮನೆ ಹಾನಿ ಉಂಟಾಗಿ 6 ತಿಂಗಳಾಗಿದೆ. ಮನೆ ಕಳೆದುಕೊಂಡವರು ನಿರ್ಮಾಣ ಕಾರ್ಯ ಆರಂಭಸಿದ್ದಾರೆ. ಕಾಮಗಾರಿ ಆರಂಭವಾಗಿರುವ ಬಗ್ಗೆ ಸ್ಥಳಿಯ ಕಂದಾಯ ಅಧಿಕಾರಿಗಳು ಜಿಪಿಎಸ್ ಸಹ ಮಾಡಿ ಸಂಭಂದಿಸಿದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಸಂಬಂಧಿಸಿದ ಎಲ್ಲಾ ದಾಖಲೆಯನ್ನ ಸರಕಾರಕ್ಕೆ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ಪ್ರಕ್ರಿಯೆ ಮುಗಿದರು ಕೂಡ ಸರಕಾರದಿಂದ ನಿರಾಶ್ರಿತರ ಖಾತೆಗೆ ಮಾತ್ರ ಇನ್ನೂ ಹಣ ಜಮಾವಾಗದೆ ಇರುವುದು ಮನೆ ಕಳೆದುಕೊಂಡವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಹೀಗಾಗಿ ಸರಕಾರ ಆದಷ್ಟು ಶೀಘ್ರದಲ್ಲಿ ನಿರಾಶ್ರಿತರ ಸಮಸ್ಯೆ ಬಗೆಹರಿಸಲು ಬಾಕಿ ಇರುವ ಹಣವನ್ನ ತಕ್ಷಣ ಬಿಡುಗಡೆ ಮಾಡಬೇಕಿದೆ.