ಸುದ್ದಿಬಿಂದು ಬ್ಯೂರೋ
ಕಾರವಾರ : ಅರಬ್ಬೀ ಸಮುದ್ರದಲ್ಲಿ(Arabian Sea) ನಾಲ್ಕು ಕೋಸ್ಟ್ ಗಾರ್ಡ್ ಬೋಟ್‌ಗಳಿಂದ ಗುಂಡಿನ ದಾಳಿ, ಬೋಟ್ ನಲ್ಲಿದ್ದವ ಕಣ್ಣಿಗೆ ಕಾಣದಷ್ಟು ದೂರಕ್ಕೆ ಸಿಡಿದ ಗುಂಡುಗಳು..ಗುಂಡಿನ ಸದ್ದು ತಣ್ಣಗಾಗುತ್ತಿದ್ದಂತೆ ವಾಟರ್ ಫೈರ್.ಹೀಗೆ ಒಂದರ ಮೇಲೆ ಒಂದರಂತೆ ಕಾರ್ಯಚರಣೆ ನಡೆಸಿದ‌ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನುಸುಳುಕೋರರ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದ್ದರು. ಅಷ್ಟಕ್ಕೂ ಆಳ ಸಮುದ್ರದಲ್ಲಿ‌ ಕಾರ್ಯಚರಣೆ ನಡೆದಿರೋದು ಯಾಕೆ‌ ಅಂತೀರಾ ಈ ಸ್ಟೋರಿ ಪೂರ್ತಿ ಓದಿ

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ (karwar)ಕೋಸ್ಟ್‌ಗಾರ್ಡ್ಸ್ ಬಂದರಿನಿಂದ ನೂರಾರು ಜನರನ್ನ ಹೊತ್ತು ಒಂದರ ಹಿಂದೆ ಒಂದರಂತೆ ಗಸ್ತು ಶಿಪ್‌ಗಳಾದ ಕಸ್ತೂರ್ ಬಾ ಗಾಂಧಿ, ಸಾವಿತ್ರಿ ಬಾಯಿ ಪುಲೆ, ಸಿ-448, ಐಎನ್‌ಎಸ್ ವಿಕ್ರಮ್ ಸಮುದ್ರದತ್ತ ದಾಂಗುಡಿಯಿಟ್ಟಿತ್ತು. ಜನರನ್ನ ಹೊತ್ತು ಸಾಗುತ್ತಿದ್ದ ಹಡಗಿನ ಸುತ್ತಲೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕೋಸ್ಟ್ ‌ಗಾರ್ಡ್ (Indian Coast Guord)ಸಿಬ್ಬಂದಿ ಎರಡು ಜೆಮಿನಿ ಬೋಟ್‌ನಲ್ಲಿ ತಿರುಗಲಾರಂಭಿಸಿದ್ದರು. ಆ ಶಿಪ್ ಸುರಕ್ಷಿತವಾಗಿದೆ ಎಂದು ಅರಿತ ಬಳಿಕ ನೀರಿಗೆ ಬಿದ್ದು ಸ್ಮೋಕ್ ಮೂಲಕ ಸಿಗ್ನಲ್ ಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ಆ ಸಿಬ್ಬಂದಿ ಸುತ್ತುವರಿದು ರಕ್ಷಣೆ ಮಾಡಿದ್ದರು.

ಇದನ್ನೆಲ್ಲಾ ನೋಡುತ್ತಿದ್ದ ಜನರು ಯುದ್ಧ ನಡೆದೇ ಬಿಟ್ಟಿತಾ ಅಂತಾ ಬಿಟ್ಟ ಕಣ್ಣು ಬಿಟ್ಟಂತೇ ದೂರದಿಂದ ನೋಡುತ್ತಿದ್ದರು. ಅಷ್ಟರಲ್ಲೇ ವಾಟರ್ ಕೆನನ್ ಮೂಲಕ ಭಾರೀ ಪ್ರಮಾಣದಲ್ಲಿ ದೂರಕ್ಕೆ ನೀರು ಚಿಮ್ಮಿಸುವ ಮೂಲಕ ಯಾವುದೇ ಅಗ್ನಿ ಅವಘಡ ನಡೆಯಂತೇ ನೋಡಿಕೊಳ್ಳಲಾಯಿತು. ಆಕಾಶದಲ್ಲಿ ಸಿಗ್ನಲ್‌ಗಳನ್ನು ಹಾರಿಸಿದ ಬಳಿಕ ಬೋಟ್‌ನಲ್ಲಿ ದೊಡ್ಡ ಗನ್ ಮೂಲಕ ಸಮುದ್ರದಲ್ಲಿ ಲೂಟಿಕೋರರತ್ತ ಭಾರೀ ಪ್ರಮಾಣದಲ್ಲಿ ಬುಲೆಟ್ ಫೈರಿಂಗ್ ನಡೆಸಲಾಯ್ತು. ಸಮುದ್ರದಲ್ಲಿ ಇಂಡಿಯನ್ ಟೆರಿಟರಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ದೃಢೀಕರಣಗೊಂಡ ಬಳಿಕ ಈ ಗಸ್ತು ಶಿಪ್‌ಗಳು ಹಿಂತಿರುಗಿತ್ತು. ಈ ಎಲ್ಲಾ ದೃಶ್ಯಗಳನ್ನು ಕಂಡು ನೈಜವಾಗಿಯೂ ಯುದ್ಧ ನಡೆಯುತ್ತಿದೆ ಅಂದಕೊಂಡ್ರಾ…? ಇದು ಕೇವಲ ಇಂಡಿಯನ್ ಕೋಸ್ಟ್‌ಗಾರ್ಡ್ಸ್ ವತಿಯಿಂದ ನಡೆದ ಅಣುಕು ಕಾರ್ಯಾಚರಣೆಯಷ್ಟೇ.

ಫೆ.1ಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ಡೇ( Indian Coast Guard Day)ಆಚರಣೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಸ್ ವತಿಯಿಂದ ಈ ಅಣುಕು ಕಾರ್ಯಾಚರಣೆ ಆಯೋಜಿಸಲಾಗಿತ್ತು.ಇಂಡಿಯನ್ ಕೋಸ್ಟ್ ಗಾರ್ಡ್ಸ್ ಯಾವ ರೀತಿಯಲ್ಲಿ ಭಾರತದ ಸಮುದ್ರ ಭಾಗದ ಸರಹದ್ದಿನಲ್ಲಿ ಯಾವ ರೀತಿ ಪಹರೆ ಕಾಯುತ್ತೆ, ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿದ್ದಾಗ ಯಾವ ರೀತಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತೆ, ಸಮುದ್ರ ಭಾಗದಲ್ಲಿ ಯಾವುದಾದ್ರೂ ಶಿಪ್ ಅಥವಾ ಬೋಟ್‌ಗಳಲ್ಲಿ ಅಗ್ನಿ ಅವಘಢ ನಡೆದರೆ, ಸಮುದ್ರದ ಲೂಟಿಕೋರರು ದಾಳಿಯನ್ನು ಯಾವ ರೀತಿ ಎದುರಿಸಲಾಗುತ್ತದೆ ಮುಂತಾದವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಣುಕು ಕಾರ್ಯಾಚರಣೆ ನಡೆಸಲಾಗಿತ್ತು.

ನಾಲ್ಕು ಗಸ್ತು ಶಿಪ್‌ಗಳಲ್ಲಿ ಸುಮಾರು 12ಕಿ.ಮೀ.ಆಳಕ್ಕೆ ತೆರಳಿದ ನೂರಾರು ಜನರು,ಇಂಡಿಯನ್ ಕೋಸ್ಟ್ ಗಾರ್ಡ್ಸ್‌ಗಳ ಕಾರ್ಯ ವೈಖರಿ ಕಂಡು ಖುಷಿ ಪಟ್ಟರು. ಕ್ಷಣಕ್ಷಣಕ್ಕೂ ವಿವಿಧೆಡೆ ನಡೆಯುವ ಕಾರ್ಯಾಚರಣೆಯ ಮಾಹಿತಿಯನ್ನು ಕೂಡಾ ಸಿಬ್ಬಂದಿ ಮೂಲಕ ಜನರು ಪಡೆದುಕೊಂಡರು.ಸಾಕಷ್ಟು ಬಾರಿ ಸಮುದ್ರದಾಳದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ ಮಾಡಿದ್ದಲ್ಲದೇ, ವಿದೇಶಗಳಿಂದ ಬರುವ ಸರಕು ಹಡಗುಗಳ ಮೇಲೆ ಲೂಟಿಕೋರರು ದಾಳಿ ನಡೆಸಿದಾಗಲೂ ಇಂಡಿಯನ್ ಕೋಸ್ಟ್‌ಗಾರ್ಡ್ಸ್ ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.

ಇಂಡಿಯನ್ ಕೋಸ್ಟ್ ಗಾರ್ಡ್ಸ್ ಸಮುದ್ರದಾಳದಲ್ಲಿ ನಡೆಸಿದ ಅಣುಕು ಕಾರ್ಯಾಚರಣೆ ಜನರಿಗೆ ಅತ್ಯದ್ಭುತ ಅನುಭವ ನೀಡಿ ಪುಳಕಿತಗೊಳಿಸಿದ್ದಲ್ಲದೇ, ಹಲವು ಪೋಷಕರು ಹಾಗೂ ಯುವಕರನ್ನು ಭಾರತೀಯ ರಕ್ಷಣಾ ಪಡೆಯತ್ತ ಆಕರ್ಷಿಸಿತರಾದರು.