ಸುದ್ದಿಬಿಂದು ಬ್ಯೂರೋ
ಕಾರವಾರ : ಪಂಚ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನ ಹಿಂದೆ ಈಗ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಲು ನಾಯಕರು ಕಸರತ್ತು ಆರಂಭಿಸಿದ್ದಾರೆ.ಲೋಕ ಸಮರಕ್ಕೆ ಇನ್ನೇನು ಆರು ತಿಂಗಳು ಇರುವಾಗಲೇ ಹೈಕಮಾಂಡ್ ಮೇಲೆ ಒತ್ತಡ ತರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಸರತ್ತು ನಡೆಸುತ್ತಿದ್ದಾರೆ.ಹಾಲಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಅಭ್ಯರ್ಥಿಯಾಗಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂಬ ಸಬೂಬು ಹೇಳಿಕೊಂಡು ಅಭ್ಯರ್ಥಿಯಾಗುವ ಕನಸು ಹೊತ್ತ ಕಾಗೇರಿಯವರು ಜಿಲ್ಲೆ ಸುತ್ತುವ ಕಾರ್ಯ ಶುರು ಮಾಡಿದ್ದಾರೆ.

ಪಕ್ಷ ಅಧಿಕಾರ ಇದ್ದಾಗ ಕಾರ್ಯಕರ್ತರ ಬಗ್ಗೆ ಕಾಳಜಿ ತೋರದ ಕಾಗೇರಿಯವರು ಈಗ ಲೋಕಸಭಾ ಅಭ್ಯರ್ಥಿಯಾಗಲು ನೊಂದ ಕಾರ್ಯಕರ್ತರ ಮನ ಗೆಲ್ಲುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಗೇರಿಯವರ ಈ ತಂತ್ರದ ಬಗ್ಗೆ ಕಾರ್ಯಕರ್ತರು ಈಗ ಮಾತನಾಡಿಕೊಳ್ಳಲು ಶುರು ಮಾಡಿಕೊಂಡಿದ್ದಾರೆ.

ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲೆಯನ್ನು ಇಬ್ಭಾಗಿಸುವ ಕೆಲಸಕ್ಕೆ ಕೈ ಹಾಕಿದರಾದರೂ ಬಾರಿ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈ ಬಿಟ್ಟಿದ್ದರು. ಬಳಿಕ ಅಖಂಡ ಉತ್ತರಕನ್ನಡ ಜಿಲ್ಲೆಯನ್ನು ಒಡೆಯುವ ಸಂಬಂಧಿಸಿದಂತೆ ತಮ್ಮ ಇಲಾಖೆಯ ಮೂಲಕವೇ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಬೇರ್ಪಡಿಸುವ ಮೂಲಕ ಜಿಲ್ಲೆಯ ಇಬ್ಭಾಗಕ್ಕೆ ಮುನ್ನುಡಿ ಬರೆದಿದ್ದರು. ಜಿಲ್ಲೆಯ ಕರಾವಳಿಯ ಬಗ್ಗೆ ನಿರ್ಲಕ್ಷ್ಯ ತೋರಿದ್ದರು.

ಕಳೆದ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮತ್ತೆ ಮಂತ್ರಿಯಾಗಲು ಪ್ರಯತ್ನ ನಡೆಸಿದರಾದರೂ ಸಚಿವ ಪದವಿ ಕಾಗೇರಿಯವರಿಗೆ ತಪ್ಪಿತ್ತು. ಬಳಿಕ ವಿಧಾನಸಭೆಯ ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರಕಾರ ಇದ್ದ ಅವಧಿಯಲ್ಲಿ ಹಿಂದುಳಿದ ವರ್ಗದ ಯಾವೊಬ್ಬ ನಾಯಕರು ಮುನ್ನೆಲೆಗೆ ಬರದಂತೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ತಮ್ಮ ಹಠ ಸಾಧಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಕಾನೂನು ಪ್ರಕೋಷ್ಠದ ಕಾರವಾರದ ನಿತಿನ್ ರಾಯ್ಕರ್ ಕುಮಟಾ ಶಿರಸಿ ಮಾರ್ಗ ಮಧ್ಯೆ ರಸ್ತೆ ಅಪಘಾತವಾಗಿ ಅವರನ್ನು ಶಿರಸಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.ನಿತಿನ್ ರಾಯ್ಕರ್ ರಸ್ತೆ ಅಪಘಾತದಲ್ಲಿ ತೊಂದರೆ ಒಳಗಾದಾಗ ತಮ್ಮ ಕ್ಷೇತ್ರದಲ್ಲೇ ಇದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವರ ಜೀವ ಉಳಿಸುವ ಕಾರ್ಯ ಅಲ್ಲದೇ ಅವರನ್ನು ಕೊನೆಗಳಿಗೆಯಲ್ಲೂ ನೋಡಲು ಧಾವಿಸಿರಲಿಲ್ಲ.ಬಳಿಕ ನಿತಿನ್ ರಾಯ್ಕರ್ ಅಪಘಾತದಲ್ಲಿ ತುಂಬಾ ಏಟು ಬಿದ್ದ ಪರಿಣಾಮವಾಗಿ ಅಸುನೀಗಿದ್ದರು. ಅವರು ಅಸುನೀಗಿದ ಬಳಿಕವು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಾರದ ಕಾಗೇರಿಯವರು ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಂತೆ ನಿತಿನ್ ರಾಯ್ಕರ್ ನೆನಪಿಸಿಕೊಂಡು ಅವರ ಮನೆಗೆ ಭೇಟಿ ನೀಡುವ ಕೆಲಸ ಮಾಡಿದ್ದಾರೆ.

ಪಕ್ಷದಲ್ಲಿ ಸ್ವಜನಪಕ್ಷಪಾತ ಮಾಡುತ್ತಿದ್ದ ಕಾಗೇರಿಯವರು ಈಗ ಕಾರ್ಯಕರ್ತರ ನೋವು ಆಲಿಸಲು ಜಿಲ್ಲೆ ಸುತ್ತುತ್ತಿರುವುದಕ್ಕೆ ಅವರದೇ ಪಕ್ಷದ ಕಾರ್ಯಕರ್ತರು ಆಡಿಕೊಳ್ಳುತ್ತಿರುವುದು ಕಂಡುಬಂದಿದೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಅಭ್ಯರ್ಥಿ ಅನಂತಕುಮಾರ ಹೆಗಡೆ ತಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳದಿದ್ದರೂ ಅವರ ಮೌನವನ್ನೇ ಬಂಡವಾಳ ಮಾಡಿಕೊಂಡ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭ್ಯರ್ಥಿಯಾಗಲು ತೆರೆಮರೆಯ ಕಸರತ್ತು ನಡೆಸುತ್ತಿರುವ ಈಗಂತೂ ಗುಟ್ಟಾಗಿ ಉಳಿದಿಲ್ಲ.

ಬಿಜೆಪಿ ಪಕ್ಷದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನೀಡುತ್ತದೆಯೋ ಇಲ್ವೇ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಲೋಕ ಕದನಕ್ಕೆ ಅವಕಾಶ ಕೊಡುತ್ತದೆಯೋ ಅನ್ನೋದನ್ನ ಕಾದು ನೋಡಬೇಕಿದೆ.