ಸುದ್ದಿಬಿಂದು ಬ್ಯೂರೋ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ನಾಮಧಾರಿ ನಾಯಕ, ಜಿಲ್ಲಾ ಕಾಂಗ್ರೆಸ್ ನ ಸುದೀರ್ಘವಾಗಿ ಮುನ್ನಡೆಸಿದ ಮಾಜಿ ಅಧ್ಯಕ್ಷ ಹಾಗೂ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಅವರ ಪುತ್ರ ಅಧಿಕೃತವಾಗಿ ರಾಜಕೀಯ ಪ್ರವೇಶದ ಸುಳಿವು ದೊರೆತಂತಿದೆ..

ಶಾಸಕ ಭೀಮಣ್ಣ ನಾಯ್ಕ್ ಅವರ ಪುತ್ರ ಅಶ್ವಿನ್ ಭೀಮಣ್ಣ ಅವರು ಹಲವು ವರ್ಷಗಳಿಂದ ತಂದೆಯ ಜೊತೆಗೆ ಅವರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಿದ್ದೂ ಹಾಗೂ ನೊಂದವರು ಮತ್ತು ಬಡವರಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದು,ಎಲ್ಲಿಯೂ ಕೂಡ ತಾನು ಮಾಡಿದ ಸೇವೆಗೆ ಪ್ರಚಾರ ಪಡೆಯದೇ ಎಲೆ ಮರಿ ಕಾಯಿಯಂತೆ ತಮ್ಮ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ಇತೀಚಿನ ರಾಜಕೀಯ ಕ್ಷಿಪ್ರ ಬೆಳವಣಿಗೆಯ ನಂತರ ಅಶ್ವಿನ್ ಭೀಮಣ್ಣ ಅವರು ತಂದೆಯವರ ನೆಚ್ಚಿನ ಕ್ಷೇತ್ರ ಹಾಗೂ ತಂದೆಯವರು ಕರ್ಮ ಭೂಮಿ ಎಂದೆ ಹಲವು ಬಾರಿ ಹೇಳಿದಂತಹ ಯಲ್ಲಾಪುರ ಕ್ಷೇತ್ರದಲ್ಲಿ ಮಿಂಚಿನ ಓಡಾಟ ನಡೆಸುತ್ತಿದ್ದು, ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮರಳಿ ಕಾಂಗ್ರೆಸ್ ಗೆ ಪ್ರಯತ್ನದಲ್ಲಿರುವಾಗಲೇ ಭೀಮಣ್ಣ ಅವರ ಈ ನಡೆ ಕುತೂಹಲಕಾರಿಯಾಗಿದೆ, ಹೆಬ್ಬರ್ ಕಾಂಗ್ರೆಸ್ ಸೇರ್ಪಡೆಗೆ ಆರ್ ವಿ ದೇಶಪಾಂಡೆಯಾದಿಯಾಗಿ ಜಿಲ್ಲೆಯ ಬಹುತೇಕ ನಾಯಕರ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲೇ ಅಶ್ವಿನ್ ಭೀಮಣ್ಣ ಅವರ ಕ್ಷೇತ್ರದ ಓಡಾಟ ದೇಶಪಾಂಡೆಯವರ ಹೊಸ ರಾಜಕೀಯ ದಾಳ ಎಂಬ ಮಾತನ್ನು ರಾಜಕೀಯ ವಿಶ್ಲೇಷಕರು ವಿಮರ್ಶೆ ಮಾಡುತ್ತಿದ್ದಾರೆ.

ಅಶ್ವಿನ್ ಭೀಮಣ್ಣ ಅವರಿಗೆ ಯಲ್ಲಾಪುರ ಹೊಸದಾದರೂ ತನ್ನ ತಂದೆಯ ಪ್ರಭಾವ ಮತ್ತು ತಮ್ಮ ಸ್ವಂತ ಊರು ಸಹ ಯಲ್ಲಾಪುರ ಕ್ಷೇತ್ರದ ಬನವಾಸಿಯ ಮಳಲಗಾವ್ ಆದರಿಂದ ಮತ್ತು 2019ರ ಉಪಚುನಾವಣೆಯಲ್ಲಿ ತನ್ನ ತಂದೆ ಸ್ಪರ್ದಿಸಿದ್ದ ಕ್ಷೇತ್ರವಾಗಿದ್ದರಿಂದ, ಬಹುತೇಕ ಸ್ಥಳೀಯ ಮಟ್ಟದ ಹಿರಿಯ ನಾಯಕರು ಭೀಮ್ಮಣ್ಣ ಅವರ ಆಪ್ತರೆ ಇರುವುದು ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ.

ತಂದೆಯ ಅಧಿಕಾರ ಮತ್ತು ಪ್ರಭಾವ, ಹಾಗೂ ಕ್ಷೇತ್ರದಲ್ಲಿ ತಮ್ಮದೆ ಸಮಾಜದ ಮತಗಳ ಜೊತೆಗೆ ಹಿಂದೂಳಿದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಾಗಿರುವು ಭೀಮಣ್ಣ ಅವರ ಪುತ್ರನನ್ನು ರಾಜಕೀಯದತ್ತ ಕೈ ಬೀಸಿ ಕರೆದಂತಿದೆ. ಹೀಗಾಗಿ ಈಗಿನಿಂದಲ್ಲೆ ಅಶ್ವಿನ್ ಅವರನ್ನ ಕ್ಷೇತ್ರದಲ್ಲಿ ಪರಿಚಯಿಸುವ ಕೆಲಸಗಳು ಆರಂಭವಾಗಿದೆ ಎನ್ನಲಾಗಿದೆ.