ಸುದ್ದಿಬಿಂದು ಬ್ಯೂರೋ
ಕುಮಟ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿಯಿಂದ ಕುಮಟಾದ ವನವಾಸಿ ಕಲ್ಯಾಣದ ರತ್ನಾಕರದಲ್ಲಿ ಆಯೋಜಿಸಿದ್ದ ಉಚಿತ ಪಂಚಗವ್ಯ ಆಯುರ್ವೇದ ತಪಾಸಣಾ ಶಿಬಿರವನ್ನು ಖ್ಯಾತ ಕೀರ್ತನಕಾರ ನಾರಾಯಣದಾಸ್ ಶಿರಸಿ ಮತ್ತು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಭಟ್ ಕೂಜಳ್ಳಿಇವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋ ಸೇವಾ ಗತಿವಿಧಿಯ ಪ್ರಾಂತ ಪ್ರಶಿಕ್ಷಣ ಪ್ರಮುಖ ದತ್ತಾತ್ರೇಯ ಭಟ್ ಇವರು ವೇದಿಕೆಯಲ್ಲಿ ಇರುವ ಗಣ್ಯರನ್ನು ಪರಿಚಯಿಸುತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಅನಾದಿಕಾಲದಿಂದ ಪಂಚಗವ್ಯ ಔಷಧವೇ ಆರೋಗ್ಯ ಕಾಪಾಡಿಕೊಳ್ಳುವ ಮೂಲ ವೈದ್ಯಕೀಯ ಪದ್ಧತಿಯಾಗಿತ್ತು.
ನಾವು ಮಾಡುವ ಕರ್ಮ ದೋಷಗಳ ಕಾರಣದಿಂದಾಗಿ ಬೇರೆ ಬೇರೆ ರೋಗಗಳು ಬರುತ್ತಿದ್ದು ಅವುಗಳ ನಿವಾರಣೆಗೆ ಪಂಚಗವ್ಯ ಔಷಧಿಗಳು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಜನಸಾಮಾನ್ಯರಲ್ಲಿ ಭಾರತೀಯ ಗೋವಿನ ಮಹತ್ವವನ್ನು ತಿಳಿಸಿ ಮನವರಿಕೆ ಮಾಡಿಕೊಡಲು ಗೋಸೇವಾ ಗತಿವಿಧಿಯು ಹಲವಾರು ಆಯಾಮಗಳನ್ನು ಹೊಂದಿದ್ದು ಅವುಗಳಲ್ಲಿ ಪಂಚಗವ್ಯ ಚಿಕಿತ್ಸಾ ವಿಧಾನವೂ ಒಂದಾಗಿದೆ ಎಂದು ತಿಳಿಸಿದರು.
ತನ್ಮೂಲಕ ಜನಜಾಗ್ರತಿಗೊಳಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಈ ವಿಧಾನವನ್ನು ವ್ಯಾಪಕವಾಗಿ ಬೆಳೆಸುವ ಕಾರ್ಯವನ್ನು ಗತಿವಿಧಿ ಮಾಡುತ್ತಿದೆ ಎಂದು ಹೇಳಿದರು. ಡಾಕ್ಟರ್ ಡಿಪಿ ರಮೇಶ್ ರವರು ಮಾತನಾಡುತ್ತಾ ಬೇರೆ ಬೇರೆ ಔಷಧಗಳಿಂದ ಗುಣಪಡಿಸಲು ಅಸಾಧ್ಯವಾದ ಕಾಯಿಲೆಗಳನ್ನು ಪಂಚಗವ್ಯ ಪದ್ಧತಿಯಲ್ಲಿ ಗುಣಪಡಿಸಿದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಈ ಪದ್ಧತಿಯನ್ನು ಮತ್ತೆ ಪುನಹ ಜಾಗೃತಿಗೊಳಿಸುವ ಕಾರ್ಯವು ಅವಶ್ಯವಾಗಿ ಆಗಬೇಕಿದೆ ಎಂದರು.
ವೇದಿಕೆಯಲ್ಲಿ ಪ್ರಸಿದ್ಧ ಕೀರ್ತನಕಾರ ನಾರಾಯಣ ದಾಸ ಶಿರಸಿ, ಹೊನ್ನಾವರ ತಾಲೂಕ ಸಹ ಸಂಘಚಾಲಕ ಮಾನ್ಯ ರಾಮಚಂದ್ರ ಕಾಮತ್ ,
ರಾಷ್ಟ್ರೀಯ ಸ್ವಯಂಸೇವಕ ಸಂಘದ ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಣಿವಣ್ಣ, ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ. ಭಟ್ ಕೂಜಳ್ಳಿ, ಡಾಕ್ಟರ್ ಡಿ.ಪಿ. ರಮೇಶ, ದತ್ತಾತ್ರೇಯ ಭಟ್ಟ ಮುಂತಾದವರು ಇದ್ದರು. ದಿನೇಶ ಗೌಡ ಇವರು ಪಂಚಗವ್ಯ ಔಷಧಿಗಳ ಮಾರಾಟ ವ್ಯವಸ್ಥೆ ಮಾಡಿದರು. ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತರಾದ ಜಯಲಕ್ಷ್ಮಿ ಹೆಗಡೆ, ಪ್ರೀತಿ, ಕುಮಾರಿ ಶ್ವೇತಾ ಭಟ್ಟ, ಕುಮಾರಿ ತೇಜಾ ರೋಗಿಗಳ ನೋಂದಣಿ ಮಾಡಿಕೊಳ್ಳುವ ಕಾರ್ಯವನ್ನು ನಿರ್ವಹಿಸಿದರು. ಸೇವಾ ಭಾರತಿಯ ಶಿರಸಿ ವಿಭಾಗ ಸಂಯೋಜಕ ಮೋಹನ ಗುನಗಾ, ವನವಾಸಿ ಕಲ್ಯಾಣದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಧರ ಸಾಲಿಹಕ್ಕಲ, ಸುಕನ್ಯಾ, ತಾರಾ ಮುಂತಾದವರು ಕಾರ್ಯಕರ್ತರ ಊಟೋಪಚಾರಾದಿ ವ್ಯವಸ್ಥೆಯನ್ನು ಮಾಡಿದ್ದರು. ಒಟ್ಟು 50 ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಗೋಸೇವಾ ಗತಿವಿಧಿಯ ಜಿಲ್ಲಾ ಸಂಯೋಜಕ ವಿಶ್ವೇಶ್ವರ ಭಟ್ಟರು ಕಾರ್ಯಕ್ರಮದ ನಿರೂಪಣೆ ಮಾಡಿದರು.