ಸುದ್ದಿಬಿಂದು ಬ್ಯೂರೋ
ಕಾರವಾರ : ಒಂದು ಪಕ್ಷದ ಜಿಲ್ಲಾಧ್ಯಕ್ಷರಾದವರು ಜಿಲ್ಲೆಯಲ್ಲಿ ಸುತ್ತಾಡಿ ಪಕ್ಷ ಬಲವರ್ಧನೆ ಮಾಡಬೇಕು ಎಂದು ಅವರಿಗೆ ಆ ಹುದ್ದೆಯನ್ನ ನೀಡಲಾಗುತ್ತದೆ. ಆದರೆ ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಾತ್ರ‌ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದರು ಪಕ್ಷದ ಕಾರ್ಯಕರ್ತರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಪಕ್ಷದವರೆ ಆರೋಪಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಸಮಯದಲ್ಲಿ ಕುಮಟ ಕ್ಷೇತ್ರವನ್ನ ಬಿಟ್ಟು ಬೇರ ಯಾವ ಕ್ಷೇತ್ರಕ್ಕೂ ಜಿಲ್ಲಾಧ್ಯಕ್ಷರು ಪಾದಸ್ಪರ್ಶ ಮಾಡಿಲ್ಲವೆಂದು ಚುನಾವಣೆ ಸಮಯದಲ್ಲೆ ಪಕ್ಷದೊಳಗೆ ಭಾರೀ ಚರ್ಚೆಗಳು ನಡೆದಿತ್ತು. ಕುಮಟ ಹೊರತು ಪಡಿಸಿ ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಭೇಟಿ ನೀಡದೆ ಹೋದರು ಸಹ ಅಭ್ಯರ್ಥಿಗಳ ವರ್ಚಸ್ಸಿನಿಂದ ಅವರು ಶಾಸಕರಾಗಿ ಆಯ್ಕೆಗೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಇವರು ಕುಮಟ ಕ್ಷೇತ್ರದಲ್ಲಿ ಅದೆಷ್ಟೇ ಸುತ್ತಾಟ, ಓಡಾಟ ಮಾಡಿದ್ದರು ಕುಮಟಾ ಕ್ಷೇತ್ರದ ಕೈ ಅಭ್ಯರ್ಥಿಗೆ ಗೆಲುವಿನ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ.

ಇನ್ನೂ ಕೆಲವೆ ತಿಂಗಳಲ್ಲಿ ಲೋಕಸಭಾ ಚುನಾವಣೆ ಸಹ ಎದುರಾಗಲಿದೆ.ಈ ಹಿನ್ನಲೆಯಲ್ಲಿ ನಾಳೆ (ರವಿವಾರ) ಲೋಕಸಭಾ ಚುನಾವಣಾ ಉಸ್ತುವಾರಿ ಹೊಣೆಗಾರಿಕೆ ಹೊತ್ತಿರುವ ಎಚ್ ಕೆ ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅಂಕೋಲಾಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ‌. ಆದರ ಇದುವರೆ ಮಾಧ್ಯಮದವರಿಗೂ ಸಹ ಮಾಹಿತಿ ಇಲ್ಲದಂತಾಗಿದೆ. ಈ ಹಿಂದೆಲ್ಲಾ ಓರ್ವ ಮಂತ್ರಿಗಳು ಜಿಲ್ಲೆಗೆ ಆಗಮಿಸಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದಾದರೆ ವಾರದ ಹಿಂದೆ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದರು.

ಸಚಿವರಾಗಿರುವ ಎಚ್ ಕೆ ಪಾಟೀಲ್ ಅವರು ನಾಳೆ ಜಿಲ್ಲೆ ಆಗಮಿಸುವ ವಿಚಾರ ಪಕ್ಷದ ಕಾರ್ಯಕರ್ತರಿಗೆ ತಿಳಿದಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ನ ಅನೇಕ ಕಾರ್ಯಕರ್ತರು ಹಾಗೂ ಮುಖಂಡರೆ ಕೆಲವು ಮಾಧ್ಯಮದವರಿಗೆ ಕರೆ ಮಾಡಿ ಕಾರ್ಯಮದ ಬಗ್ಗೆ ವಿಚಾರಿಸುತ್ತಿದ್ದಾರೆ.