suddibindu.in
ಕುಮಟಾ : ಖಾಸಗಿ ಬ್ಯಾಂಕ್‌ಗಳಲ್ಲಿ ಹರಾಜ್ ಆಗುವ ವಾಹನಗಳನ್ನು ಖರೀಧಿ ಮಾಡುವವರು ಹುಶಾರ್ ಆಗಿರಿ. ಇಲ್ಲಾ ಅಂದ್ರೆ ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ಗ್ರಾಹಕರಿಗೆ ಪಂಗನಾಮ ಹಾಕುವ ಬ್ಯಾಂಕ್ ಅಧಿಕಾರಿಗಳಿಂದ ಮೋಸ ಹೋಗಬೇಕಾಗುತ್ತದೆ.ಖಾಸಗಿ ಬ್ಯಾಂಕ್‌ವೊಂದರಿಂದ ವಂಚನೆಗೊಳಗಾದ ಗ್ರಾಹಕನೋರ್ವ ಈಗ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಟ್ಟಣದಲ್ಲಿ ಶಾಖೆ ಹೊಂದಿರುವ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ವಿರುದ್ಧ ವಿನೋದ ದೇಶಭಂಡಾರಿ ಎಂಬುವವರು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ನನ್ನ ಮಾಲೀಕತ್ವದ ಹೆಸರಿನಲ್ಲಿರುವ ಓಮ್ನಿ ವಾಹನವನ್ನು ಬೇರೆಯವರ ಹೆಸರಿನಲ್ಲಿ ಸಾಲದ ಖಾತೆ ಸೃಷ್ಟಿಸಿ, ಸಾರಿಗೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ, ಬ್ಲಾಕ್ ಲಿಸ್ಟ್ನಲ್ಲಿರುವ ವಾಹನವನ್ನು ಉಡುಪಿಯಲ್ಲಿರುವ ಶ್ರೀರಾಮ್ ಫೈನಾನ್ಸ್ನ ಕೇಂದ್ರ ಕಚೇರಿಯಲ್ಲಿ ಹರಾಜು ಮಾಡಲಾಗಿದೆ.

ಇದನ್ನೂ ಓದಿ

ಈ ಪ್ರಕರಣದಲ್ಲಿ ವಿನೋದ ದೇಶಭಂಡಾರಿ ಅವರ ಮಾಲೀಕತ್ವದಲ್ಲಿರುವ ಓಮ್ನಿನಿ ವಾಹನದ ಮೇಲೆ ಸೋಮಶೇಖರ ಎಂಬ ವ್ಯಕ್ತಿಗೆ ಹೇಗೆ ಸಾಲ ನೀಡಿದರು. ಆತ ಆ ಸಾಲದ ಹಣ ಕಟ್ಟಿಲ್ಲವೆಂದು ಮತ್ತೆ ಹರಾಜು ಮಾಡಿ, ಅದರಿಂದ ಬಂದ ಹಣವನ್ನು ಸಾಲಕ್ಕೆ ಮರುಪಾವತಿ ಮಾಡಿಕೊಳ್ಳುವ ಮೂಲಕ ಸಾರಿಗೆ ಅಧಿನಿಮಯ ಕಾನೂನಿನ ಉಲ್ಲಂಘನೆಯಾಗುವ ಜೊತೆಗೆ ಆರ್‌ಬಿಐನ ನಿರ್ದೇಶನವನ್ನು ಕೂಡ ಗಾಳಿಗೆ ತೂರಲಾಗಿದೆ ಎಂಬುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದುಬರುತ್ತದೆ.

ಸಂಸ್ಥೆಯಿಂದ ಹರಾಜ್ ಆದ ವಾಹನದಿಂದ ಯಾವುದಾದರೂ ಅಪಘಾತವಾದರೆ ಅಥವಾ ಯಾವುದೇ ಅಕ್ರಮ ಚಟುವಟಿಕೆ ಬಳಕೆಯಾಗಿ ಪೊಲೀಸ್ ಕೇಸ್ ಆದರೆ ಮೊದಲು ಈ ವಾಹನ ಯಾರ ಮಾಲೀಕತ್ವದಲ್ಲಿದೆಯೋ ಅವರು ಅಂದರೆ ವಿನೋದ ದೇಶಭಂಡಾರಿ ಅವರನ್ನೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗುತ್ತದೆ. ಫೈನಾನ್ಸ್ ಅಧಿಕಾರಿಗಳು ಮಾಡಿದ ತಪ್ಪಿಗೆ ನಾನೇನೇಕೆ ತಲೆಕೊಡಬೇಕೆಂದು ಪ್ರಶ್ನಿಸುವ ವಿನೋದ ಅವರು ಈ ಸಂಬಂಧ ಕುಮಟಾದ ಜೆಎಂಎಫ್‌ಸಿ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದೇನೆ. ನನ್ನ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ಚಾರ್‌ಶೀಟ್ ಸಲ್ಲಿಸುವಂತೆ ಕುಮಟಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಆದೇಶ ಮಾಡಿದೆ.

ಕೋರ್ಟ್ ಆದೇಶ ಮಾಡಿ 9 ತಿಂಗಳಾದರೂ ಈವರೆಗೂ ಕೋರ್ಟಗೆ ಪೊಲೀಸ್ ಅಧಿಕಾರಿಗಳು ಚಾರ್‌ಶೀಟ್ ಸಲ್ಲಿಸಿಲ್ಲ. ಇದರಿಂದ ಕೋರ್ಟ್, ಪೊಲೀಸ್ ಠಾಣೆಗೆ ಪದೇ ಪದೇ ಅಲೆಯುವಂತಾಗಿದೆ. ನನಗೆ ವಂಚಿಸಿದ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಶೀಘ್ರ ಕ್ರಮವಾಗಬೇಕು. ನನಗಾದ ನಷ್ಟಕ್ಕೆ ಸೂಕ್ತ ಪರಿಹಾರ ಕೊಡುವ ಜೊತೆಗೆ ನನಗಾದ ಮೋಸ, ವಂಚನೆ ಇನ್ಯಾರಿಗೂ ಆಗಬಾರದು. ಪೊಲೀಸ್ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಕೋರ್ಟ್‌ಗೆ ಈ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಬೇಕು. ಈ ಮೂಲಕ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಪೊಲೀಸ್ ಅಧಿಕಾರಿಗಳ ಬಳಿ ವಿನೋದ ದೇಶಭಂಡಾರಿ ವಿನಂತಿ ಮಾಡಿಕೊಂಡಿದ್ದಾರೆ.