suddibindu.in
ಹಾಡಹಗಲೇ ದೇವಸ್ಥಾನದ ಗಂಟೆಗಳನ್ನ ಎಗರಿಸಿದ ಐನಾತಿ ಕಳ್ಳ
ಹೊನ್ನಾವರ : ಪಟ್ಟಣದ ಜೋಡಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ಹಾಡಹಗಲೇ ದೇವಸ್ಥಾನದ ಗಂಟೆಗಳನ್ನ ಕಳ್ಖತನ ಮಾಡಿರುವ ಘಟನೆ ನಡೆದಿದೆ.ಪಟ್ಟಣದ ಕೆಳಗಿನಪಾಳ್ಯದಲ್ಲಿರುವ ಜೋಡಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ ಸುಮಾರು ಒಂದು ಗಂಟೆ ದೇವಸ್ಥಾನದಲ್ಲೇ ಕುಳಿತು ಜನರಿಲ್ಲದ್ದನ್ನ ಗಮನಿಸಿದ ಬಳಿಕ 2 ಗಂಟೆಗಳನ್ನ ಕದ್ದು ಗೋಣಿ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಸುಮಾರು ತಾಸು ಕಳೆದ ಬಳಿಕ ಗಂಟೆಗಳ ನಾಪತ್ತೆ ಆಗಿರುವುದ‌ನ್ನ ಆಡಳಿತ ಮಂಡಳಿ ಗಮನಿಸಿದೆ. ಬಳಿಕ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕಳ್ಳತನ ಆಗಿರುವ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಿ.ಎಸ್‌.ಎಸ್ (TSS) ಆಡಳಿತಾಧಿಕಾರ ನೇಮಕಕ್ಕೆ ತಡೆಯಾಜ್ಞೆ
ಕಾರವಾರ :-ರಾಜ್ಯದ ಪ್ರತಿಷ್ಟಿತ ಸಹಕಾರಿ ಸಂಘವಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ಟಿ.ಎಸ್‌.ಎಸ್ (TSS)ಆಡಳಿತಾಧಿಕಾರ ನೇಮಕಕ್ಕೆ ತಡೆಯಾಜ್ಞೆ ಸಿಕ್ಕಿದ್ದು ಹಿಂದಿನ ಆಡಳಿತ ಮಂಡಳಿಯ ಗೋಪಾಲಕೃಷ್ಣ ವೈದ್ಯ ತಂಡಕ್ಕೆ ಸದ್ಯಕ್ಕೆ ಜಯ ಸಿಕ್ಕಿದೆ.ನಿಯಮಾವಳಿ ಪ್ರಕಾರ ಟಿ.ಎಸ್.ಎಸ್ ಆಡಳಿತ ಮಂಡಳಿಯ ಚುನಾವಣೆ ನಡೆದಿಲ್ಲ ಎಂದು ಕೆಲವು ದಿನದ ಹಿಂದೆ ಆಡಳಿತ ಮಂಡಳಿ ಅಸಿಂಧು ಎಂದು ಜಿಲ್ಲಾ ಸಹಕಾರಿ ನಿಬಂಧಕರು ತೀರ್ಪು ನೀಡಿದ್ದರು. ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ, ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು‌, ಸದ್ಯ ಆಡಳಿತ ವರ್ಗ ಹಾಗೂ ದಾವೆ ಹೂಡಿದ ಸದಸ್ಯರ ನಡುವೆ ಕಾನೂನು ಹೋರಾಟ ಮುಂದುವರೆದಿದೆ.

ಕಾರು ದರೋಡೆ ಮಾಡಿದ ‌ಆರೋಪಿಗಳ ಬಂಧನ
ಯಲ್ಲಾಪುರ : ಅರೆಬೈಲ್ ಘಾಟ್ ನಲ್ಲಿ ಕಾರು ದರೋಡೆ ಮಾಡಿದ ಆರೋಪಿಗಳನ್ನ ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಸಾಂಗ್ಲಿಯ ಸೂರಜ್ ಸುಧಾಕರ ಚೌಹಾಣ, ರವೀಂದ್ರ ತಂದೆ ಭಜರಂಗ ಮದನಿ, ( ಬಂಧಿತ ಆರೋಪಿಗಳಾಗಿದ್ದಾರೆ. ಮೇ 23 ರಂದು ರಾಜಸ್ತಾನ್ ಮೂಲದ ಸುರೇಶ ರಾವ್ ಹಿಮ್ಮತ್ ರಾಮಜೀರಾವ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದಿರು ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ‌.

ಬೈಕ್ ಸವಾರನ ಕೊರಳಿಗೆ ಸುತ್ತಿದ ಕೇಬಲ್
ಕುಮಟಾ: ಕಂಟೇನರ್ ವಾಹನ ಚಾಲಕನ ಅಜಾಗರೂಕತೆಯಿಂದ ಅನಾಹುತ ಬೈಕ್ ಸವಾರನ ಕೊರಳಿಗೆ ಕೇಬಲ್ ಸುತ್ತಿಕೊಂಡು ಬೈಕ್‌ನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಮಲ್ಲಾಪುರದಲ್ಲಿ ನಡೆದಿದೆ‌. ಘಟನೆಯಲ್ಲಿ ಬೈಕ್ ಸವಾರ ಅರುಣ ಮಡಿವಾಳ ಸೇರಿ ಪತ್ನಿ, ಬಾಲಕಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಬಂದ ಕೃಷ್ಣಮೂರ್ತಿ ಭಟ್ಟ ಎಂಬುವವರು ದರ್ಪ ತೋರಿದ್ದಾರೆ. ಕೆಲ ಸಮಯ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳಕ್ಕಾಗಮಿಸಿದ ಕುಮಟಾ ಪೊಲೀಸರು ವಾಹನ ಚಾಲಕನಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ಉಂಟಾಗಿದೆ.

ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ
ಕಾರವಾರ: ನಗರದಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಇಂದು ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ವಾರ್ಷಿಕೋತ್ಸವದ ಹಿನ್ನಲೆ ದೇವಸ್ಥಾನವನ್ನು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿದವು. ಸರದಿ ಸಾಲಿನಲ್ಲಿ ನಿಂತ ನೂರಾರು ಭಕ್ತರು ದೇವರಿಗೆ ಹಣ್ಣುಕಾಯಿ ಗರಿಕೆ ಒಪ್ಪಿಸಿ ಇಷ್ಠಾರ್ಥ ಬೇಡಿಕೊಂಡರು. ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ರಸ್ತೆಯಲ್ಲಿ ಪೆಂಡಾಲು ಹಾಕಿ ಅನ್ನ ಸಂತರ್ಪಣೆ ಮಾಡಲಾಯಿತು.

ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಜೂನ್ 4 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮತ ಎಣಿಕೆ ಸಂದರ್ಭದಲ್ಲಿ, ಮತಗಳ ಎಣಿಕೆಯಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಕರ್ತವ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.ಅವರು ಇಂದು ಕುಮಟಾದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೂನ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ
ಕಾರವಾರ :ಯಾಂತ್ರೀಕೃತ ಮೀನುಗಾರಿಕೆ ದೋಣಿಯನ್ನು ಬಳಸಿ ಕರ್ನಾಟಕ ಕರಾವಳಿಯಲ್ಲಿ ಪ್ರತಿ ವರ್ಷ ಜೂನ್ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಮೀನು ಹಿಡಿಯುವುದನ್ನು ನಿಷೇಧಿಸಿರುವ ಹಿನ್ನಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮೀನುಗಾರಿಕಾ ಯಾಂತ್ರೀಕೃತ ದೋಣಿಗಳು ಜೂನ್ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ 10 ಅಶ್ವ ಶಕ್ತಿಯ ವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ ನಾಡದೋಣಿಗಳ ಮೂಲಕ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ಇರುತ್ತದೆ.

ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
ಕಾರವಾರ : ಪ್ರಸಕ್ತ ಸಾಲಿಗೆ ಉತ್ತರ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ದಾಂಡೇಲಿ ತಾಲ್ಲೂಕಿನ ಎ.ಪಿ.ಜಿ ಅಬ್ದುಲ್ ಕಲಾಂ ವಸತಿ ಶಾಲೆ(ಶಾಲೆ/ ಪದವಿ ಪೂರ್ವ)ಗೆ ವಿವಿಧ ವಿಷಯಗಳನ್ನು ಬೋಧಿಸಲು ಅರ್ಹ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅತಿಥಿ ಶಿಕ್ಷಕರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಎ.ಪಿ.ಜಿ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರು -೮೦೯೫೯೨೩೩೦೦ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾರವಾರ ದೂ.ಸಂ: ೦೮೩೮೨-೨೨೦೩೩೬ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲ ಸಾಹಸ ಕ್ರೀಡೆಗಳ ಆಯ್ಕೆ ಪ್ರಕ್ರಿಯೆ
ಕಾರವಾರ : ಪ್ರಸಕ್ತ ಸಾಲಿನಲ್ಲಿ ಕಾರವಾರ ಕ್ರೀಡಾ ವಸತಿ ನಿಲಯಕ್ಕೆ ೫ನೇ ಮತ್ತು ೮ನೇ ತರಗತಿಗೆ ಸೇಲಿಂಗ್, ಕಯಾಕಿಂಗ್ ಮತ್ತು ಕೆನೊಯಿಂಗ್ ಕ್ರೀಡಾ ವಿಭಾಗಗಳಲ್ಲಿನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಲಾದೇವಿ ತಾಲ್ಲೂಕು ಕ್ರೀಡಾಂಗಣದಲ್ಲಿ ಮೇ 31 ರಂದು ಬೆಳಗ್ಗೆ9-30 ಗಂಟೆಗೆ ನಡೆಯಲಿದೆ. 4ನೇ ಮತ್ತು 7ನೇ ತರಗತಿಗಳಲ್ಲಿ ತೇರ್ಗಡೆಯಾದ ಹಾಗೂ ಕ್ರಮವಾಗಿ ಪ್ರಸ್ತುತ ಶೈಕ್ಷಣಿಕ ಸಾಲಿನ 1ನೇ ಜೂನ್‌ಗೆ 11 ಮತ್ತು 14ವರ್ಷಗಳನ್ನು ಮೀರದ ಬಾಲಕರಿಗೆ ಪ್ರವೇಶಾವಕಾಶ ನೀಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಜನನ ಪ್ರಮಾಣ ಪತ್ರ, ವ್ಯಾಸಾಂಗ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿ ತರಬೇಕು. ಇಲಾಖೆಯಿಂದ ಮೊದಲನೇ ಬಾರಿ ಜಲಸಾಹಸ ಕ್ರೀಡಾ ವಿಭಾಗದಲ್ಲಿ ವಸತಿ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಇವರ ದೂರವಾಣಿ ಸಂಖ್ಯೆ: ೭೮೯೯೧೦೪೬೯೯ ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಹೊನ್ನಾವರ- ಹೊನ್ನಾವರ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ್ ಪರಿವರ್ತಕ-1ರ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಮಾವಿನಕುರ್ವಾ, ಸಲ್ಕೋಡ, ಕಡ್ಲೆ, ಹಡಿನಬಾಳ ಮತ್ತು ಸುಬ್ರಹ್ಮಣ್ಯ ಫೀಡರ್‌ಗಳ ವ್ಯಾಪ್ತಿಯಲ್ಲಿ ಹಾಗೂ ಕಾಸರಕೊಡ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸದ ನಿಮಿತ್ತ ಕೆಳಗಿನೂರು, ಟೊಂಕಾ, ಬಳ್ಕೂರು, ದೇವರಗದ್ದೆ ಹಾಗೂ ಇಂಡುಗುಂಜಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಮೇ.29 ರಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಹೊನ್ನಾವರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮುದಾಯ ಬದುಕಿನ ಶಿಬಿರ ಬದುಕುವ ಶಿಕ್ಷಣ ನೀಡಲಿದೆ
ಭಟ್ಕಳ: ಸಮುದಾಯ ಬದುಕಿನ ಶಿಬಿರ ಬದುಕುವ ಶಿಕ್ಷಣ ನೀಡಲಿದೆ ಎಂದು ಭಟ್ಕಳ ಏಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ್ ಹೇಳಿದರು. ಅವರು ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ರಂಗಮಂದಿರದಲ್ಲಿ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಭಟ್ಕಳ ಇವರು ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಶಿಬಿರವು ತಾಳ್ಮೆ, ಸಹನೆ, ಹೊಂದಾಣಿಕೆ, ನಾಯಕತ್ವ ಗುಣಗಳನ್ನು ಕಲಿಸುವುದರ ಜೊತೆಗೆ ಪರಿಸರದೊಂದಿಗೆ ಬದುಕಲು ಕಲಿಸಲಿದೆ ಎಂದು ಹೇಳಿದರು.