suddibindu
ಹಳಿಯಾಳ : ಕಳೆದ ಒಂದು ವರ್ಷದಿಂದ ಹೊಗೆಯಾಡುತ್ತಿದ್ದ ಹಳಿಯಾಳ ಬಿಜೆಪಿ ಪಕ್ಷದಲ್ಲಿನ ಕೆಲವು ಮುಖಂಡರ ನಡುವಿನ ಶೀತಲ ಸಮರ ಸಾರ್ವಜನೀಕವಾಗಿ ಕೈ ಕೈ ಮಿಲಾಯಿಸಿ ಸ್ಪೋಟಗೊಳ್ಳುವ ಮೂಲಕ ಹಳಿಯಾಳದಲ್ಲಿ ಸದ್ಯ ಬಿಜೆಪಿ ಎ ಟೀಮ್ ಮತ್ತು ಬಿ ಟೀಮ್ ಎರಡು ಗುಂಪುಗಳಿವೆ ಎನ್ನುವ ಮಾತುಗಳಿಗೆ ಪುಷ್ಠಿ ದೊರಕಿದಂತಾಗಿದೆ.

ಕಳೆದ ವರ್ಷ ನಡೆದಿದ್ದ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಆಪ್ತರೂ ಆಗಿರುವ ಬಿಜೆಪಿ ಪಕ್ಷದ ಜಿಲ್ಲಾ ಖಾಯಂ ಆಹ್ವಾನಿತ ಸದಸ್ಯ ಅನಿಲ್ ಮುತ್ನಾಳೆ, ಹಳಿಯಾಳ ತಾಲೂಕಾ ಪ್ರಧಾನ ಕಾರ್ಯದರ್ಶಿ ವಿ.ಎಮ್.ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ ಹಾಗೂ ಬಿಜೆಪಿ ಮುಖಂಡ ವಿಲಾಸ ಯಡವಿ ಅವರು ಚುನಾವಣೆ ಸಮಯದಲ್ಲಿ ತಮ್ಮ ವಿರುದ್ದ ಹಾಗೂ ಪಕ್ಷದ ವಿರುದ್ದ ಕಾರ‍್ಯನಿರ್ವಹಿಸುತ್ತಿದ್ದಾರೆ ಎಂದು ಹಲವು ಮುಖಂಡರು ಕಾರ‍್ಯಕರ್ತರು ಸುನೀಲ್ ಹೆಗಡೆ ಅವರಿಗೆ ದೂರು ಸಲ್ಲಿಸುತ್ತಲೇ ಇದ್ದರಂತೆ.

ಇದನ್ನೂ ಓದಿ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಐದು ಜನ ಮುಖಂಡರಲ್ಲಿ ಕೆಲವರು ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೊಟ್ನೇಕರ ಹಾಗೂ ಅವರ ಪುತ್ರ ಹಳಿಯಾಳ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಅವರನ್ನು ಹಳಿಯಾಳ ಬಿಜೆಪಿ ಮಂಡಲದ ಗಮನಕ್ಕೂ ತರದೆ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಸಿದ್ದರು.ಅಲ್ಲದೇ ಲೋಕಸಭಾ ಚುನಾವಣೆಯ ಪ್ರಚಾರವನ್ನು ಕೂಡ ಘೊಟ್ನೇಕರ ಪಾಳಯದೊಂದಿಗೆ ಕೂಡಿ ನಡೆಸಿ ಬಿಜೆಪಿ ಮಂಡಲದ ಪ್ರಮುಖರು ಹಾಗೂ ಸುನೀಲ್ ಹೆಗಡೆ ಅವರಿಂದ ದೂರವಿದ್ದು ಬಹಿರಂಗವಾಗಿಯೇ ತಾವು ಬಿ ಟೀಮ್ ಎನ್ನುವಂತೆ ತೊರಿಸಿದ್ದು ಶೀತಲ ಸಮರಕ್ಕೆ ಇನ್ನೂ ತುಪ್ಪ ಸುರಿದಂತಾಗಿತ್ತು.

ಜೆಡಿಎಸ್ ಜೊತೆಯೇ ಇದ್ದ‌ ಇವರನ್ನು ಸುನೀಲ್ ಹೆಗಡೆ ಅವರು ಸುದ್ದಿಗೊಷ್ಠಿಯಲ್ಲಿ ಸ್ಟಾರ್‌ ಪ್ರಚಾರಕರೆಂದು ಇವರಿಗೆ ಮಾತೃಪಕ್ಷ ಬಿಜೆಪಿ ಬಗ್ಗೆ ಇರುವ ನಿಷ್ಕ್ರೀಯತೆ ಬಗ್ಗೆ ಲೇವಡಿ ಮಾಡಿದ್ದರು. ಇನ್ನೂ ಇಷ್ಟೇಲ್ಲಾ ಬೆಳವಣಿಗೆಗಳ ನಡುವೆ ಚುನಾವಣೆ ಮುಗಿದ ಬಳಿಕವು ಹಲವಡೆ ಸುನೀಲ್ ಹೆಗಡೆ ಅವರ ಹಾಗೂ ಪಕ್ಷದ ವಿರುದ್ದವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಕುರಿತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅವರ ಮಾತುಗಳನ್ನು ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಯಥಾವತ್ತಾಗಿ ತಲುಪಿಸಿದ್ದರು.

ಇದರಿಂದ ಕುಪಿತಗೊಂಡ ಸುನೀಲ್ ಹೆಗಡೆ ಅವರು ವಿಲಾಸ ಯಡವಿ ಮತ್ತು ಅನಿಲ್ ಮುತ್ನಾಳೆ ಅವರನ್ನು ಸೋಮವಾರ ರಾತ್ರಿ ಮನೆಗೆ ಕರೆದು ಬುದ್ದಿವಾದ ಹೇಳುವ ಸಂದರ್ಭದಲ್ಲಿ ಹೆಗಡೆ ಅನುಯಾಯಿಗಳು ಕಪಾಳಮೋಕ್ಷ ಮಾಡಿದ್ದಾರೆಂದು ತಿಳಿದು ಬಂದಿದೆ.ಗ್ರಾಮಕ್ಕೆ ತೆರಳಿದ ಹೆಗಡೆ : ಇಷ್ಟಕ್ಕೆ ನಿಲ್ಲದೇ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ ಅವರ ಗ್ರಾಮ ಕೆಸರೊಳ್ಳಿಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಮಂಗಳವಾರ ತೆರಳಿದ ಹೆಗಡೆ ಅವರು ಅಲ್ಲಿಯ ಪಂಚರನ್ನು ಸಂಪರ್ಕಿಸಿ ಕರಂಜೆಕರ ಅವರು ನಮ್ಮ ಮತ್ತು ಪಕ್ಷದ ಕುರಿತು ಅವಾಚ್ಯ ಶಬ್ಬಗಳಿಂದ ನಿಂದಿಸುತ್ತಿದ್ದಾರೆ. ತಕ್ಷಣ ಗ್ರಾಮದಲ್ಲಿ ಹಿರಿಯರ ಸಮಕ್ಷಮ ಸಭೆ ಕರೆದು ಗಣಪತಿ ಅವರಿಗೆ ಬುದ್ದಿ ಮಾತು ಹೇಳುವಂತೆ ತಿಳಿಸಿದ್ದಾರೆ.

ಇದಾದ ಕೇಲವೆ ಕ್ಷಣಗಳಲ್ಲಿ ಪಟ್ಟಣದ ಕೆಎಲ್‌ಎಸ್ ಇಂಜೀನಿಯರಿಂಗ್ ಕಾಲೇಜ್ ಸಮೀಪ ಬಿಜೆಪಿ ಎ ಟೀಮ್‌ನ ಸಂತೋಷ ಘಟಕಾಂಬಳೆ ಮತ್ತು ಬಿ ಟೀಮ್‌ನ ವಿ ಎಮ್ ಪಾಟೀಲ್ ಸೇರಿದಂತೆ ಇನ್ನಿತರರ ನಡುವೆ ಸಾರ್ವಜನೀಕವಾಗಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ ಘಟನೆ ನಡೆದೇ ಬಿಟ್ಟಿದೆ.

ಘಟನೆ ಕುರಿತು ಒಂದೇ ಪಕ್ಷದ ಎರಡು ತಂಡದವರು ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿದ್ದಾರೆ. ಆದರೇ ಅದಾಗಲೇ ಜಿಲ್ಲಾ ಮತ್ತು ರಾಜ್ಯ ಮುಖಂಡರಿಗೆ ಈ ಬಗ್ಗೆ ಮಾಹಿತಿ ದೊರಕಿದ್ದು, ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಅವರು ದೂರವಾಣಿ ಮೂಲಕ ಸುನೀಲ್ ಹೆಗಡೆ ಅವರನ್ನು ಸಂಪರ್ಕಿಸಿ ಪಕ್ಷದ ಕಚೇರಿಗೆ ಕರೆಯಿಸಿಕೊಂಡು ಚರ್ಚೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವ ಭರವಸೆ ನೀಡಿದ ನಂತರ ನೀಡಲು ಉದ್ದೇಶಿಸಿದ್ದ ದೂರುಗಳನ್ನು ಹಿಂದಕ್ಕೆ ಪಡೆದ ಘಟನೆಯು ನಡೆದಿದೆ. ಸಧ್ಯ ಈ ಕುರಿತು ಹಳಿಯಾಳ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೇ ಹಳಿಯಾಳ ಕ್ಷೇತ್ರದಲ್ಲಿ ಈ ಘಟನೆ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ.