ಅಂಕೋಲಾ: ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳದಲ್ಲಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಆರತಿಬೈಲ್ ಘಟ್ಟದಲ್ಲಿ ನಡೆದಿದೆ.

ಮಹಾರಾಷ್ಟ್ರದಿಂದ ಗೋವಾಕ್ಕೆ ಖಾಲಿ ಗ್ಯಾಸ್ ಸಿಲೆಂಡರ್ ತುಂಬಿಕೊಂಡು ಹೋಗುತ್ತಿದ್ದಾಗ ಆರತಿಬೈಲ್ ಘಟ್ಟದಲ್ಲಿ ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಹಳ್ಳದಲ್ಲಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು, ಖಾಲಿ ಸಿಲಿಂಡರಗಳು ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಚಾಲಕ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.

ಕಳೆದ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಸೇಬು ಹಣ್ಣು ಸಾಗಿಸುತ್ತಿದ್ದ ಲಾರಿ ಹೆದ್ದಾರಿ ಪಕ್ಕದ ಕಟ್ಟೆಗೆ ಡಿಕ್ಕಿಯಾಗಿ ಕಟ್ಟೆ ಒಡೆದಿತ್ತು. ಅದರ ನಂತರ ಕಟ್ಟೆ ಇದ್ದ ಸ್ಥಳದಲ್ಲಿ ಮರದ ಟೊಂಗೆ ಹಾಕಿ ಬೇಲಿ ನಿರ್ಮಿಸಲಾಗಿತ್ತು. ಇದೀಗ ಕಂಟೇನರ್ ಆ ಬೇಲಿ ಸಮೇತ ಹಳ್ಳದಲ್ಲಿ ಬಿದ್ದಿದೆ.