ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಲಬುರಗಿ : ಹಳೆ ವೈಷಮ್ಯದ ಹಿನ್ನಲೆಯಲ್ಲಿ ಹಾಡುಹಗಲೇ ಗ್ರಾಮ ಪಂಚಾಯತ ಅಧ್ಯಕ್ಷನನ್ನ ಬರ್ಬರವಾಗಿ ಹತ್ಯೆ (Murder of Gram Panchayat President) ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ (Afazalpur)ತಾಲೂಕಿನ ಚೌಡಾಪೂರದಲ್ಲಿ ನಡೆದಿದೆ.

ಮದರಾ ( ಬಿ) ಗ್ರಾಮ ಪಂಚಾಯತಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ (50) ಹತ್ಯೆಯಾದ ಅಧ್ಯಕ್ಷ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ಚೌಡಾಪುರ ಬಸ್ ನಿಲ್ದಾಣ ಎದುರು ನೂರಾರು ಜನರ ಸಮ್ಮುಖದಲ್ಲೇ ಬುಲೇರಾ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗೌಡಪ್ಪ ಬಿರಾದಾರ ಅವರನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಗೌಡಪ್ಪ ಬಿರಾದಾರ ಕಟ್ಟಾ ಕಾಂಗ್ರೆಸ್ ಹಾಗೂ ತಮ್ಮ ಬೆಂಬಲಿಗರಾಗಿದ್ದು, ಈ ಕೊಲೆಯು ಮನಸ್ಸಿಗೆ ಅಘಾತ ಮೂಡಿದೆ. ಕೊಲೆಯನ್ನು ಬಲವಾಗಿ ಖಂಡಿಸುತ್ತೇನೆ. ಆರೋಪಗಳನ್ನು ತಕ್ಷಣ ಬಂಧಿಸಬೇಕು. ಘಟನೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡುತ್ತೇನೆ. ಉದ್ಯೋಗ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ ಸಂಶಯ ವ್ಯಕ್ತಪಡಿಸಿದ್ದಾರೆ‌.

ಗ್ರಾಮ ಪಂಚಾಯತ್ ಗೆ ಒಟ್ಟು ನಾಲ್ಕು ಸಲ ಸದಸ್ಯರಾಗಿ ಆಯ್ಕೆಯಾಗಿರುವ ಗೌಡಪ್ಪ ಬಿರಾದಾರ ಅವರು ಇತ್ತೀಚೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು.‌ ಎಂದಿನಂತೆ ಮದರಾ ಬಿ ಗ್ರಾಮದಿಂದ ಚೌಡಾಪುರಕ್ಕೆ ಬಂದು ಬಸ್ ನಿಲ್ದಾಣ ಎದುರು ನಿಂತಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಲಗಾಣಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.