ಸುದ್ದಿಬಿಂದು ಬ್ಯೂರೋ
ಕಾರವಾರ : ಜೀವದ ಹಂಗು ತೊರೆದು ಹಗಲು, ರಾತ್ರಿ ಸಮಾಜದ ಒಳಿತಿಗೋಸ್ಕರ ದುಡಿಯುತ್ತಿರುವ ಪತ್ರಕರ್ತ ಸಮೂಹಕ್ಕೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉ. ಕ. ಜಿಲ್ಲಾಧ್ಯಕ್ಷ ಸದಾನಂದ ದೇಶಭಂಡಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಅವರ ಮೂಲಕ ಸಿ ಎಂ ಅವರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ 90 ಶೇಕಡಾ ಪತ್ರಕರ್ತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಪ್ರತಿ ದಿನ ಹಗಲು-ರಾತ್ರಿ ಎನ್ನದೆ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಪತ್ರಕರ್ತರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ. ಮುಖ್ಯವಾಗಿ ಕಾರ್ಮಿಕ ಇಲಾಖೆಯ ಮೂಲಕ ನೊಂದ ಪತ್ರಕರ್ತರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು.

ಪ್ರಮುಖ ಬೇಡಿಕೆಗಳು
ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು.

ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300ಕ್ಕೂ ಅಧಿಕ ಸಿಬ್ಬಂದಿಯವರನ್ನು ಸರ್ಕಾರ ಕೂಡಲೇ ನೇಮಕಗೊಳಿಸಿ ಪತ್ರಕರ್ತರ ಕಾರ್ಯಗಳನ್ನು ತ್ವರಿತವಾಗಿ ಆಗುವಂತೆ ಕ್ರಮ ವಹಿಸಬೇಕು.

ಅಕ್ರಿಡೇಟ್ ಹಾಗೂ ನಾನ್‍ ಅಕ್ರಿಡೇಟ್‍ ಜರ್ನಲಿಸ್ಟ್ ಎನ್ನುವ ತಾರತಮ್ಯವನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು. ಸರ್ಕಾರ ವಾರ್ತಾ ಇಲಾಖೆ ಮೂಲಕ ಕೆ.ಎಸ್.ಆರ್.ಟಿ.ಸಿ. ನಿಗಮದಿಂದ ಅಕ್ರಿಡೇಟ್‍ ಜರ್ನಲಿಸ್ಟಗಳಿಗೆ ಮಾತ್ರ ಉಚಿತ ಬಸ್ ಪಾಸ್‍ ರಾಜ್ಯಾದ್ಯಂತ ಓಡಾಡಲು ಅವಕಾಶ ಕಲ್ಪಿಸಿಕೊಟ್ಟರೆ ಅದೇ ರೀತಿ ನಾನ್- ಅಕ್ರಿಡೇಟ್‍ ಜರ್ನಲಿಸ್ಟಗಳಿಗೆ (ಅಂದರೆ ಆರ್.ಎನ್.ಐ. ಹೊಂದಿರುವಂತ ಪತ್ರಕರ್ತರಿಗೆ) ಬಿ.ಎಂ.ಟಿ.ಸಿ. ಕಾರ್ಪೋರೇಷನ್ ವತಿಯಿಂದ ವರ್ಷಕ್ಕೆ 600ರೂಪಾಯಿಗಳನ್ನು ಪಾವತಿಸಿದರೆ ವರ್ಷ ಪೂರ್ತಿ ಬಿ.ಎಂ.ಟಿ.ಸಿ.ಯಲ್ಲಿ ಪತ್ರಕರ್ತರಿಗೆ ಓಡಾಡಲು ಅವಕಾಶ ಕಲ್ಪಿಸಿದ್ದು ತಾರತಮ್ಯಕ್ಕೊಂದು ಸ್ಪಷ್ಟ ಪುರಾವೆಯಂತಿದೆ. ಈ ರೀತಿಯಾಗಿ ಸರ್ಕಾರ ಅಕ್ರಿಡೇಟ್ ಹಾಗೂ ನಾನ್‍ ಅಕ್ರಿಡೇಟ್‍ ಎಂಬ ತಾರತಮ್ಯ ಪತ್ರಕರ್ತರಲ್ಲಿ ಮೂಡಿಸಿರುವುದು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಇದನ್ನು ಕೂಡಲೇ ಸರಿಪಡಿಸಬೇಕು.

ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ನಿಯಮ 7ರಲ್ಲಿ ವಾರ, ಪಾಕ್ಷಿಕ, ಮಾಸಿಕ ಹಾಗೂ ಇನ್ನಿತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ. ದಿನ ಪತ್ರಿಕೆಗಳ ರೀತಿಯಲ್ಲೇ ನಿಯತಕಾಲಿಕೆಗಳು ಕೂಡ `ರೆಜಿಸ್ಟ್ರಾರ್‍ ಆಫ್ ನ್ಯೂಸ್ ಪೇಪರ್‍ ಇಂಡಿಯಾ’ ವತಿಯಿಂದ ಪರವಾನಿಗೆ ಹೊಂದಿ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ ಈ ಪತ್ರಕರ್ತರಿಗೂ ಮಾಸಾಶನ ದೊರೆಯಲೇಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.

ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತಪಟ್ಟರೆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿಗಳ ಪರಿಹಾರ ಒದಗಿಸಬೇಕು.

2018-19ರ ಆಯವ್ಯಯದಲ್ಲಿ ದಿನಪತ್ರಿಕೆ ಹಂಚುವವರ (ಪತ್ರಿಕಾ ವಿತರಕರು) ಕ್ಷೇಮಾಭಿವೃದ್ಧಿಗೆ 2 ಕೋಟಿಯ ಕ್ಷೇಮ ನಿಧಿ ಅಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಘೋಷಣೆಯಾಗಿದ್ದರೂ ಹೇಳಿಕೆಗೆ ಮಾತ್ರ ಸೀಮಿತವಾದ ಈ ನಿಧಿಯನ್ನು ಕೂಡಲೇ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಯ ಖಾತೆಗೆ ಸರ್ಕಾರ ಜಮಾವಣೆ ಮಾಡಬೇಕು.

ನಮ್ಮ ಭೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾರ್ಯ ನಿರತ ಪತ್ರಕರ್ತರ ದ್ವನಿ ಸಂಘಟನೆಯ ಜಿಲ್ಲಾದ್ಯಕ್ಸ ಸದಾನಂದ ದೇಶಭಂಡಾರಿ, ಕಾ. ನಿ. ಪ. ದ್ವನಿ ಹಳಿಯಾಳ ತಾಲೂಕಾದ್ಯಕ್ಷ ಯೋಗರಾಜ್ ಎಸ್. ಕೆ, ಕುಮಟಾ ತಾಲೂಕಾಧ್ಯಕ್ಸ ನೀಲಕಂಠ ಭಲೆಗಾರ, ಸದಸ್ಯರಾದ ಉದಯ ಭಟ್, ವಿಶ್ವನಾಥ ನಾಯ್ಕ, ಸಂಜು ಕೊಳೋರು, ಶಿವಾನಂದ ಜಿವೋಜಿ ಇನ್ನಿತರರು ಇದ್ದರು.