ಬೆಂಗಳೂರು: ಕಾವೇರಿ ನದಿ ನೀರನ್ನ ತಮಿಳುನಾಡಿಗೆ ಬಿಡುಗಡೆ ಮಾಡುವುದನ್ನ ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಬೆಂಗಳೂರು ಬಂದ್‍ಗೆ ಕರೆ ನೀಡಿದ್ದು. ಬಂದ್‍ ವೇಳೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾಗಿದ್ದ ಊಟದಲ್ಲಿ ಇಲಿ ಪತ್ತೆಯಾಗಿದೆ.

ಯಶವಂತಪುರದಲ್ಲಿ ಬಂದೋಬಸ್ತ್‍ನಲ್ಲಿದ್ದ ಸಂಚಾರಿ ಪೊಲೀಸರಿಗೆ ಕೊಟ್ಟಿದ್ದ ಊಟದಲ್ಲಿ ಇಲಿ ಪತ್ತೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗೆ ಇಲಿ ಇದ್ದ ಊಟ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಕಮಿಷನರ್ ಗರಂ ಆಗಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಊಟ ಸಪ್ಲೈ ಮಾಡಿದವರಿಗೆ ಎ.ಎನ್.ಅನುಚೇತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಊಟದಲ್ಲಿ ಇಲಿ ಕೊಟ್ಟ ಹೋಟೆಲ್ ವಿರುದ್ದ ‌ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ಅಶೋಕ್ ಟಿಫಿನ್ ಸೆಂಟರ್ 180 ಊಟ ಕೊಟ್ಟಿತ್ತು. ಪೊಲೀಸ್ ಸಿಬ್ಬಂದಿಗೆ ನೀಡುವ 2 ಹೊತ್ತಿನ ಊಟಕ್ಕೆ ರಾಜ್ಯ ಸರ್ಕಾರ 200ರೂ.ನೀಡುತ್ತದೆ. ಗುಣಮಟ್ಟದ ಊಟ ಏಕೆ ನೀಡಿಲ್ಲವೆಂದು ಅಧಿಕಾರಿಗಳ ಮೇಲೆ ಅನುಚೇತ್ ಗರಂ ಆಗಿದ್ದಾರೆ.

ಸದ್ಯ ಅದೃಷ್ಟವಶಾತ್ ಯಾರೂ ಕಳಪೆ ಊಟ ಸೇವಿಸಿಲ್ಲ. ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗೋ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.