ಬೆಂಗಳೂರು : ಟಾಪ್ 10 ಜನಪ್ರಿಯ ತಾರೆಗಳ ಪಟ್ಟಿಯನ್ನ ಇಂದು ಐಎಂಡಿಬಿ ಬಿಡುಗಡೆ ಮಾಡಿದೆ. ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ‘ಜವಾನ್’ನ ನಯನತಾರಾ ಜನಪ್ರಿಯರ ಪಟ್ಟಿಯಲ್ಲಿ ಟಾಪ್ 1 ಸ್ಥಾನ ಪಡೆದರೆ, ಕನ್ನಡತಿ ಆದ್ಯಾ ಆನಂದ್ ಹತ್ತಾರು ಬಾಲಿವುಡ್ ತಾರೆಯರನ್ನೂ ಹಿಂದಿಕ್ಕಿ ಟಾಪ್ 8ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇಂಟರ್ನೆಟ್ ಮೂವಿ ಡಾಟಾಬೇಸ್ (ಐಎಂಡಿಬಿ) ಪ್ರತಿ ವಾರವೂ ಜನಪ್ರಿಯ ತಾರೆಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತದೆ. ಸರಿಸುಮಾರು 200 ಮಿಲಿಯನ್ ವೆಬ್‌ಸೈಟ್ ಭೇಟಿಗಳ ಮಾಹಿತಿ ಸಂಗ್ರಹಿಸಿ ಮತ್ತು ಸಾಪ್ತಾಹಿಕ ಡೇಟಾವನ್ನು ಆಧರಿಸಿ ಐಎಂಡಿಬಿ ಈ ಪಟ್ಟಿಯನ್ನ ಬಿಡುಗಡೆ ಮಾಡುತ್ತದೆ. ಅದರಂತೆ ಈ ವಾರದ ಟಾಪ್ 10 ಜನಪ್ರಿಯ ತಾರೆಗಳ ಪಟ್ಟಿಯಲ್ಲಿ ಐದು ಸ್ಥಾನ ಜವಾನ್ ಸಿನೇಮಾಕ್ಕೆ ಸಿಕ್ಕಿದೆ.

ನಯನತಾರಾ ಟಾಪ್ 1ರಲ್ಲಿದ್ದರೆ, ಶಾರುಕ್ ಖಾನ್ ಟಾಪ್ 2, ಅಟ್ಲೀಕುಮಾರ್ ಟಾಪ್ 3ರಲ್ಲಿದ್ದಾರೆ. ವಿಶೇಷವೆಂದ್ರೆ, ನೆಟ್ ಫ್ಲಿಕ್ಸ್ ನ ಫ್ರೈಡೇ ನೈಟ್ ಮೂವಿಯಲ್ಲಿ ನಟಿಸಿದ್ದ ಕನ್ನಡತಿ ಆದ್ಯಾ ಆನಂದ್ ಕೂಡ ಈ ಬಾರಿಯ ಐಎಂಡಿಬಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 8ನೇ ಸ್ಥಾನದಲ್ಲಿ ಆದ್ಯಾ ಸ್ಥಾನ ಗಳಿಸಿಕೊಳ್ಳುವ ಮೂಲಕ ಬಾಲಿವುಡ್ ನ ಅಗ್ರಗಣ್ಯ ತಾರೆಯರ ಸಾಲಿನಲ್ಲಿ ಕಾಣಿಸಿಕೊಂಡಿದ್ದು, ಆದ್ಯಾಳ ಬಳಿಕ ಉಳಿದ ಕೊನೆಯ ಎರಡು ಸ್ಥಾನಗಳಲ್ಲಿ ವಿಜಯ್ ಸೇತುಪತಿ ಹಾಗೂ ರಿಧಿ ಡೋಗ್ರಾ ಇದ್ದಾರೆ.

ಬಾಲಿವುಡ್ ನಲ್ಲಿ ಕನ್ನಡತಿಯ ಕಮಾಲ್
ಸದ್ಯ ಬಾಲಿವುಡ್ ಸಿನೇಮಾಗಳಲ್ಲಿ ದಕ್ಷಿಣದ ತಾರೆಯರ ವೈಭವ ಶುರುವಾಗಿದೆ. ದಕ್ಷಿಣದ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್,‌ ಮಾಲಿವುಡ್ ಸಿನೇಮಾಗಳು ಇತ್ತೀಚಿಗೆ ಬಾಲಿವುಡ್ ನ್ನೂ ಮೀರಿ‌ ಜನಪ್ರಿಯತೆಯನ್ನ ಗಳಿಸುತ್ತಿರುವುದು ಒಂದೆಡೆಯಾದರೆ, ಇಲ್ಲಿನ ನಟ- ನಟಿಯರು ಬಾಲಿವುಡ್ ನಲ್ಲಿ ಹೊಸ ಶಕೆ ಆರಂಭಿಸಿರುವುದು ಮತ್ತೊಂದು ಮೈಲಿಗಲ್ಲಾಗಿದೆ.
ಕನ್ನಡದ ಅನೇಕ ನಟಿಯರು ಈಗಾಗಲೇ ಬಾಲಿವುಡ್ ನಲ್ಲಿ ಮಿಂಚಿ, ಸಾಕಷ್ಟು ಹೆಸರು ಗಳಿಸಿದ್ದಾರೆ. ಇವರ ಸಾಲಿನಲ್ಲೀಗ ಆದ್ಯಾ ಆನಂದ್ ಕೂಡ ಸೇರಿಕೊಂಡಿದ್ದಾರೆ. ಅತಿ‌ ಕಿರಿಯ ವಯಸ್ಸಿನಲ್ಲೇ ಬಾಲಿವುಡ್ ನ ಸ್ಪರ್ಧಾ ಜಗತ್ತಿಗೆ ಕಾಲಿರಿಸಿ ಹತ್ತಾರು ತಾರೆಯರನ್ನೂ ಮೀರಿ ಆದ್ಯಾ ಬೆಳೆಯುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ಮಡಿಕೇರಿಯಲ್ಲಿ ಹುಟ್ಟಿ ಸಿಂಗಾಪುರದಲ್ಲಿ ಬೆಳೆದ ಆದ್ಯಾ, 2021ರ ಮಾರ್ಚ್ನಲ್ಲಿ ‘ನೆಟ್‌ಫ್ಲಿಕ್ಸ್’ನ ‘ಬಾಂಬೇ ಬೇಗಮ್ಸ್’ ವೆಬ್ ಸಿರೀಸ್‌, 2022ರಲ್ಲಿ ‘ಬ್ರೇವ್‌ಹಾರ್ಟ್’ ‘ಹುಲು’ ಸಿರೀಸ್‌, ಅಮೇಜಾನ್ ಮಿನಿ ಟಿವಿಯಲ್ಲಿ ಬಿಡುಗಡೆಯಾದ ‘ಕೃಶ್ಡ್’ ಸಿರೀಸ್ ನಲ್ಲಿ ನಟಿಸಿದ್ದರು. ‘ಇಂಡಿಯನ್ ಕೃಶ್’ ಬಿರುದನ್ನ ಕೂಡ ಪಡೆದುಕೊಂಡಿದ್ದ ಆದ್ಯಾ, ಸೆ.1ರಂದು ಬಿಡುಗಡೆಯಾದ ‘ಫ್ರೈಡೇ ನೈಟ್ ಪ್ಲಾನ್’ನಲ್ಲಿ ನಿತ್ಯಾ- ನೀ*ತ್ಸ್ ಸಭರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಆದ್ಯಾ ಕೇವಲ ಸಿನಿ ರಂಗದಲ್ಲಷ್ಟೇ ಅಲ್ಲದೇ, ಕೋರ್ನೆಟೊ, ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ, ಸೆನ್ಸೋಡೈನ್, ಟಿವಿಎಸ್ ಜ್ಯುಪಿಟರ್‌ನಂಥ ಬ್ರಾಂಡ್‌ಗಳ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇಸ್ರೇಲ್‌ನ ಫಾಕ್ಸ್ ಫ್ಯಾಶನ್‌ನ ಮುಖಪುಟದಲ್ಲೂ ಆದ್ಯಾ ಮಿಂಚಿದ್ದರು.

ಅವಕಾಶ ಕೊಟ್ಟಿದ್ದಕ್ಕೆ ಚಿರ ಋಣಿ
ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಹೆಸರು ಗಳಿಸಲು ಹಿಂದಿ ಸಿನೇಮಾ ಇಂಡಸ್ಟ್ರಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಚಿರ ಋಣಿ. ನನ್ನ ಮಾತೃ ಭಾಷೆ ಕನ್ನಡದಲ್ಲೂ ನಟಿಸಬೇಕೆಂಬ ಹಂಬಲವೇನೋ ಇದೆ; ನನಗೆ ಒಪ್ಪುವಂಥ ಸೂಕ್ತ ಕಥೆಗಳು ಸಿಕ್ಕಿಲ್ಲಿ ಖಂಡಿತ ಸ್ಯಾಂಡಲ್ ವುಡ್ ನಲ್ಲೂ ನಟಿಸುವೆ.

ಆದ್ಯಾ ಆನಂದ್, ನಟಿ