ಬೆಂಗಳೂರು: ಬಾಲಿವುಡ್ ನಟ ದಿ.ಇರ್ಫಾನ್ ಖಾನ್ ಪುತ್ರ ಬಬಿಲ್ ಖಾನ್, ಜೂಹಿ ಚಾವ್ಲಾರೊಂದಿಗೆ ‘ಫ್ರೈಡೇ ನೈಟ್ ಪ್ಲಾನ್’ ನೆಟ್‌ಫ್ಲಿಕ್ಸ್ ಮೂವಿಯಲ್ಲಿ ನಟಿಸಿರುವ ‘ಇಂಡಿಯನ್ ಕೃಶ್’, ಕನ್ನಡದ ಹುಡುಗಿ ಆದ್ಯಾ ಆನಂದ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರವಷ್ಟೇ ಬಿಡುಗಡೆಯಾದ ಈ ಸಿನೇಮಾ ‘ನೆಟ್‌ಫ್ಲಿಕ್ಸ್’ನಲ್ಲಿ ಟಾಪ್- 1ರಲ್ಲಿ ಓಡುತ್ತಿದ್ದು, ಆದ್ಯಾಳ ಅದ್ಭುತ ನಟನೆ ಕೂಡ ಸಿನೇಮಾದ ಯಶಸ್ಸಿಗೆ ಕಾರಣವಾಗಿದೆ.

ಮಡಿಕೇರಿಯಲ್ಲಿ ಹುಟ್ಟಿ ಸಿಂಗಾಪುರದಲ್ಲಿ ಬೆಳೆದ ಆದ್ಯಾ, ನಟಿ, ಮಾಡೆಲ್, ಡ್ಯಾನ್ಸರ್ ಆಗಿ ಭಾರತೀಯ ಸಿನೇಮಾ ರಂಗದಲ್ಲಿ ಮಿಂಚುತ್ತಿದ್ದಾರೆ. 2021ರ ಮಾರ್ಚ್ನಲ್ಲಿ ‘ನೆಟ್‌ಫ್ಲಿಕ್ಸ್’ನ ‘ಬಾಂಬೇ ಬೇಗಮ್ಸ್’ ವೆಬ್ ಸಿರೀಸ್‌ನಲ್ಲಿ ಶಾಯ್ ಇರಾನಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಅವರು, ಉತ್ತಮ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ನಂತರ 2022ರಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ‘ಬ್ರೇವ್‌ಹಾರ್ಟ್’ ‘ಹುಲು’ ಸಿರೀಸ್‌ನಲ್ಲಿ ಆದ್ಯಾ ನಟಿಸಿದ್ದರು. ಅಮೇಜಾನ್ ಮಿನಿ ಟಿವಿಯಲ್ಲಿ ಬಿಡುಗಡೆಯಾದ ‘ಕೃಶ್ಡ್’ ಸಿರೀಸ್ ಮೂಲಕ ಪಡ್ಡೆ ಹುಡುಗರ ಮನಗೆದ್ದು ‘ಇಂಡಿಯನ್ ಕೃಶ್’ ಬಿರುದನ್ನ ಕೂಡ ಪಡೆದುಕೊಂಡಿದ್ದ ಆದ್ಯಾ, ಇದೀಗ ಸೆ.1ರಂದು ಬಿಡುಗಡೆಯಾದ ‘ಫ್ರೈಡೇ ನೈಟ್ ಪ್ಲಾನ್’ನಲ್ಲಿ ನಿತ್ಯಾ- ನೀತ್ಸ್ ಸಭರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವತ್ಸಲ್ ನೀಲಕಂಠನ್ ನಿರ್ದೇಶನದ, ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರು ಕಾಸಿಮ್ ಜಗ್ಮಗಿಯಾ ಅವರೊಂದಿಗೆ ನಿರ್ಮಿಸಿರುವ ‘ಫ್ರೈಡೇ ನೈಟ್ ಪ್ಲಾನ್’ನಲ್ಲಿ ಆದ್ಯಾ ನಿತ್ಯಾ ಪಾತ್ರಧಾರಿಯಾಗಿ ಕಥೆಗೆ ಜೀವತುಂಬಿದ್ದಾರೆ. ಬಬಿಲ್ ಖಾನ್‌ರೊಂದಿಗೆ ಆದ್ಯಾಳ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿದ್ದು, ಹೃದಯಸ್ಪರ್ಶಿ ಪ್ರಪೋಸಲ್ ಸೀನ್ ಯುವಜನತೆಯ ಮನಗೆದ್ದಿದೆ.

ಆದ್ಯಾ ಕೇವಲ ಸಿನಿ ರಂಗದಲ್ಲಷ್ಟೇ ಅಲ್ಲದೇ, ಕೋರ್ನೆಟೊ, ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ, ಸೆನ್ಸೋಡೈನ್, ಟಿವಿಎಸ್ ಜ್ಯುಪಿಟರ್‌ನಂಥ ಬ್ರಾಂಡ್‌ಗಳ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇಸ್ರೇಲ್‌ನ ಫಾಕ್ಸ್ ಫ್ಯಾಶನ್‌ನ ಮುಖಪುಟದಲ್ಲೂ ಆದ್ಯಾ ಮಿಂಚಿದ್ದರು.