ರಾಜಕೀಯ ವಿಶ್ಲೇಷಣೆ : ನಾಗರಾಜ್ ಹರಪನಹಳ್ಳಿ
ಕಾರವಾರ: ಲೋಕಸಭಾ ಚುನಾವಣೆಗೆ ಏಳು ತಿಂಗಳು ಸಮಯ ಇದೆ. ಈಗಾಗಲೇ ಕಾಂಗ್ರೆಸ್ ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಲೆಕ್ಕಾಚಾರ ಪ್ರಾರಂಭವಾಗಿದೆ. ಕೆನರಾ ( ಉತ್ತರ ಕನ್ನಡ) ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಿತ್ತೂರು, ಖಾನಾಪುರ ಸೇರಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಭೇರಿ ಭಾರಿಸಿದೆ.

ಕಾರವಾರ, ಭಟ್ಕಳ, ಶಿರಸಿ, ಹಳಿಯಾಳ , ಕಿತ್ತೂರು ವಿಧಾನಸಭಾ ಕ್ಷೇತ್ರ ಗಳಲ್ಲಿ ಗೆದ್ದು ಒಂದು ಹೆಜ್ಜೆ ಮುಂದಿದೆ. ಖಾನಾಪುರ, ಕುಮಟಾ, ಯಲ್ಲಾಪುರದಲ್ಲಿ ಗೆದ್ದಿರುವ ಬಿಜೆಪಿ ಈಗ , ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್ ಲೆಕ್ಕಾಚಾರ ಭಿನ್ನವಾಗಿದೆ .ಯಲ್ಲಾಪುರ ಕ್ಷೇತ್ರದ ಶಾಸಕರು ಕಾಂಗ್ರೆಸ್ ಗೆ ಬಂದರೆ , ಅಲ್ಲಿ ಉಪ ಚುನಾವಣೆಯಲ್ಲಿ ಒಂದು ಸ್ಥಾನ ಹಾಗೂ ಕೆನರಾ ಲೋಕಸಭಾ ಸಂಸದ ಸ್ಥಾನ ಎರಡನ್ನು ಗೆಲ್ಲಲು ತಂತ್ರ ರೂಪಿಸಿದೆ.
ಕಾಂಗ್ರೆಸ್ ನಿಂದ ಶಿವರಾಮ ಹೆಬ್ಬಾರರನ್ನು ಕೆನರಾ ಸಂಸದ ಕ್ಷೇತ್ರದ ಅಭ್ಯರ್ಥಿ ಆಗಿಸಬೇಕು ಎನ್ನುವ ಲೆಕ್ಕಾಚಾರ ಇದೆಯಾದರೂ, ಇದಕ್ಕೆ ಕಾಂಗ್ರೆಸ್ ನಲ್ಲಿ ಅಪಸ್ವರ ಇದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೆನರಾ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಮಾತ್ರ ಹವ್ಯಕರನ್ನೇ ಕಣಕ್ಕೆ ಇಳಿಸುವುದೋ ಅಥವಾ ಹಲವು ವರ್ಷಗಳ ಬೇಡಿಕೆಯಂತೆ ನಾಮಧಾರಿಗಳನ್ನು ಕಣಕ್ಕೆ ಇಳಿಸುವುದೋ ಎಂಬ ಲೆಕ್ಕಾಚಾರ ಕಾಂಗ್ರೆಸ್ಸ ಪಕ್ಷದಲ್ಲಿದೆ.
ಬಿಜೆಪಿ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಅಥವಾ ಮಾಜಿ ಸಚಿವ ಹಾಗೂಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದಲ್ಲಿ, ಸಿದ್ದಾಪುರ ಮೂಲದ , ಕಾರವಾರದ ಖ್ಯಾತ ವಕೀಲ ಜಿ.ಟಿ.ನಾಯ್ಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬಹುದು ಮಾತು ಕಾಂಗ್ರೆಸ್ ಪಕ್ಷದಲ್ಲಿ ಈಚೆಗೆ ಕೇಳಿ ಬಂದಿದೆ.
ಕಾರವಾರದ ಹಿರಿಯ ವಕೀಲ ಎಸ್ಪಿ ಕಾಮತ್ ಅವರ ಪುತ್ರ ಸುಪ್ರಿಂಕೋರ್ಟ ವಕೀಲ ದೇವದತ್ತ ಕಾಮತ್ ರನ್ನು ಲೋಕಸಭೆಗೆ ಸ್ಪರ್ಧಿಸುವಂತೆ ಕೆಲವರು ದೇವದತ್ತರನ್ನು ಕೇಳಿದ್ದೂ ಇದೆ. ಆದರೆ ವಕೀಲ ದೇವದತ್ತ ಕಾಮತ್ ಉತ್ತರ ಕನ್ನಡ ರಾಜಕೀಯದಲ್ಲಿ ಅಷ್ಟು ಆಸಕ್ತಿ ತೋರಿಸಿಲ್ಲ .
ಹೊಸ ಮುಖದ ಅನ್ವೇಷಣೆಯಲ್ಲಿ ಕಾಂಗ್ರೆಸ್:
ಕಾರವಾರದ ಜನಪ್ರಿಯ ವಕೀಲ ಜಿ.ಟಿ.ನಾಯ್ಕರನ್ನು ಕಾಂಗ್ರೆಸ್ ಪಕ್ಷದ ಧುರೀಣರು ದೆಹಲಿಗೆ ಕರೆಸಿಕೊಂಡು, ಅವರ ಹಿನ್ನೆಲೆ ವಿಚಾರಿಸಿದ್ದಾರೆ. ಅಪ್ಪಟ ಕಾಂಗ್ರೆಸ್ಸಿಗರಾದ ವಕೀಲ ಜಿ.ಟಿ.ನಾಯ್ಕ ಕಳೆದ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಕಾಂಗ್ರೆಸ್ ಪಕ್ಷ ಸಂಘಟನೆಗೆ ಯುವ ಸಮೂಹವನ್ನೇ ಕಟ್ಟಿ ಬೆಳಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹಿನ್ನೆಲೆ ಸಹ ಚೆನ್ನಾಗಿ ಬಲ್ಲವರಾಗಿದ್ದು, ಶಾಸಕ ಭೀಮಣ್ಣ ನಾಯ್ಕರಿಗೆ ಕಳೆದ ಚುನಾವಣೆಯಲ್ಲಿ ನೆರವು ಸಹ ನೀಡಿದ್ದಾರೆ.
ವಕೀಲರಾದ ಜಿ.ಟಿ.ನಾಯ್ಕ ಪ್ರಬಲ ಹಾಗೂ ದೊಡ್ಡ ಸಂಖ್ಯೆಯ ಮತದಾರರಿರುವ ನಾಮಧಾರಿ ಜನಾಂಗದವರು. ಸಾಮಾಜಿಕ ಕಾರ್ಯಗಳ ಮೂಲಕ ಹಾಗೂ ರೈತಪರ ಹೋರಾಟಗಳ ಮೂಲಕ ದೊಡ್ಡ ಸಮೂಹ ಅವರ ಹಿಂದಿದೆ. ಕಾರವಾರದಲ್ಲಿ ಜನಪ್ರಿಯ ವಕೀಲ. ಜಿಲ್ಲೆಯ ತಾಲೂಕಾ ಕೇಂದ್ರದಲ್ಲಿ ಅವರ ಬಳಿ ಕೆಲಸ ಮಾಡಿದ ನುರಿತ ವಕೀಲರು ಇದ್ದು ಅವರ ನೆರವು ಸಹ ಜಿ.ಟಿ.ನಾಯ್ಕರಿಗಿದೆ.ಹಾಗಾಗಿ ಕಾಂಗ್ರೆಸ್ ಹೊಸ ಮುಖಕ್ಕೆ ಮಣೆ ಹಾಕುವ ಸಾಧ್ಯತೆ ಇದೆ.

ಮತ್ತೊಂದು ಲೆಕ್ಕಾಚಾರ:
ಬಿಜೆಪಿ ಪ್ರಹ್ಲಾದ್ ಜೋಶಿಗೆ ಅವರನ್ನು ಉತ್ತರ ಕನ್ನಡದಿಂದ ಕಣಕ್ಕೆ ಇಳಿಸಿದಲ್ಲಿ ಖಾನಾಪುರದ ಕಾಂಗ್ರೆಸ್ ಧುರೀಣೆ ಅಂಜಲಿ ನಿಂಬಾಳಕರ್ ಅಥವಾ ಬಿ.ಕೆ. ಹರಿಪ್ರಸಾದ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳವೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಗೆ ಬರವಿಲ್ಲ. ಅರಣ್ಯ ಹಕ್ಕು ಹೋರಾಟ ಸಮಿತಿಯ ಧುರೀಣ ರವೀಂದ್ರ ನಾಯ್ಕ , ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಆರ್.ವಿ. ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ಸಹ ಲೋಕಸಭೆಗೆ ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುವವರೆ. ಆದರೆ ಇವರಿಗಡಲ್ಲಾ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದಾಗ ಸೋಲು ಕಂಡಿದ್ದಾರೆ. ಹಾಗಾಗಿ ಹೊಸ ಮುಖದ ಹುಡುಕಾಟದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಾಂಗ್ರೆಸ್ ಸರಕಾರ ೫ ಗ್ಯಾರಂಟಿಗಳಲ್ಲಿ ನಾಲ್ಕನ್ನು ಜಾರಿ ಮಾಡಿದೆ. ಇದರ ಪ್ರಯೋಜನ ಹತ್ತು ಲಕ್ಷ ಕುಟುಂಬಗಳು ಪಡೆಯತೊಡಗಿವೆ. ಹಾಲಿ ಬಿಜೆಪಿ ಸಂಸದರು ಜನರಿಂದ, ಪಕ್ಷದಿಂದ ದೂರ ಇರುವುದು ಕಾಂಗ್ರೆಸ್ ಪಕ್ಷಕ್ಕೆ ವರದಾನ ವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ಸ್ಪರ್ಧೆ ಹೆಚ್ಚಿದೆ.
ಬಿಜೆಪಿಯಲ್ಲಿ ಅಭ್ಯರ್ಥಿಗಳು ಯಾರಾರು: ?
ಬಿಜೆಪಿ ವಿಧಾನಸಭಾಯಲ್ಲಿ ಕಳಪೆ ಸಾಧನೆ ಮಾಡಿದ ನಂತರ ಪಕ್ಷ ಪುಟಿದೇಳಲು ಯತ್ನಿಸುತ್ತಿದೆ. ನಾಯಕರ ಒಳ ಮುನಿಸುಗಳು ಇನ್ನೂ ಮುಗಿದಿಲ್ಲ.
ಲೋಕಸಭಾ ಚುನಾವಣೆ ಸದ್ಯವೇ ಎದುರಾಗಲಿದೆ. ಇದಕ್ಕಾಗಿ ಪಕ್ಷದಲ್ಲಿ ಅಲ್ಪ ಸ್ವಲ್ಪ ತಯಾರಿ ನಡೆದಿದೆ. ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಪಕ್ಷ ಹಾಗೂ ರಾಜಕೀಯ ಚಟುವಟಿಕೆ ಗಳಿಂದ ದೂರವೇ ಉಳಿದಿದ್ದಾರೆ. ಹಾಗಂತ ಅವರೆಲ್ಲೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಲ್ಲ. ಅನಾರೋಗ್ಯದ ಕಾರಣ ಪಕ್ಷದ ಚಟುವಟಿಕೆಯಿಂದ ದೂರ ಇದ್ದಾರೆ ಎಂಬ ಮಾಹಿತಿ ಅವರ ಅಪ್ತರಿಂದ ಬಂದಿದೆ. ಪ್ರಧಾನಿ ಮೋದಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಾಗ ಸಂಸದ ಅನಂತ ಕುಮಾರ್ ಹೆಗಡೆ ಸಿಂಗಾಪುರದಲ್ಲಿದ್ದರು ಎಂದು ಅವರ ಪಕ್ಷದ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಮಾಡಿದ್ದರು. ಹಾಲಿ ಸಂಸದ ಅನಂತ ಕುಮಾರ್ ಒಂದು ಸಲ ಸೋತದ್ದು ಬಿಟ್ಟರೆ , ನಾಲ್ಕು ಸಲ ಸಂಸತ್ ಪ್ರವೇಶಿಸಿದ್ದಾರೆ. ಆದರೂ ಪಕ್ಷದ ಚಟುವಟಿಕೆಗಳಿಂದ ದೂರವೇ ಇದ್ದಾರೆ.


ಹಾಗಾಗಿ ಈ ಸಲ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಲೋಕಸಭಾ ಬಿಜೆಪಿ ಟಿಕೆಟ್ ಎಂಬ ಸುದ್ದಿ ಪ್ರಬಲವಾಗಿ ಹರಿದಾಡುತ್ತಿದೆ. ಅಂತಿಮ ನಿರ್ಧಾರ ಪಕ್ಷ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ಧುರೀಣರ ಅಂಬೋಣ.
ಕಾರವಾರ ಬಿಜೆಪಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಲೋಕಸಭಾ ಟಿಕೆಟ್ ಅಕಾಂಕ್ಷಿ ಎಂಬ ಮಾತು ಹರಿದಾಡುತ್ತಿದೆ. ಜಿಲ್ಲೆಯಲ್ಲಿ ಪರಿಚಿತರಾಗಿರುವ ರೂಪಾಲಿ ನಾಯ್ಕ 2000 ಮತಗಳ ಅಂತರದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಕ್ರಮಗಳ ಪ್ರಯೋಜಕಿ ಆಗುರುವ ಅವರು ಹಣಕಾಸು ವಿಷಯದಲ್ಲಿ ಸದೃಢರಾದ ಕಾರಣ ಅವರಿಗೆ ಪಕ್ಷ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಜೆಡಿಎಸ್ ಕತೆ :
ಜಿಲ್ಲೆಯಲ್ಲಿ ಜೆಡಿಎಸ್ ಕುಮಟಾ ಕ್ಷೇತ್ರ ಬಿಟ್ಟರೆ ಉಳಿದೆಡೆ ಪ್ರಬಲವಾಗಿಲ್ಲ. ಜೆಡಿಎಸ್ ಪಕ್ಷದ ಸೂರಜ್ ನಾಯ್ಕ ಸೋನಿ ವಿಧಾನಸಭೆಯ ಕುಮಟಾ ಕ್ಷೇತ್ರದಲ್ಲಿ ಕೇವಲ ೬೦೦ ಮತಗಳಿಂದ ಸೋಲು ಕಂಡರು. ಈ ಅನುಕಂಪ ಸೂರಜ್ ಮೇಲಿದೆ. ಹಾಗಾಗಿ ಜೆಡಿಎಸ್ ಸೂರಜ್ ನಾಯ್ಕ ರನ್ನು ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡಬಹುದು.
ಮಾಜಿ ಸಚಿವ ಆನಂದ ಅಸ್ನೋಟಿಕರ್ ಯಾವುದಾದರೂ ಪಕ್ಷ ಹಣಕಾಸು ಕೊಟ್ಟು ಚುನಾವಣೆಗೆ ನಿಲ್ಲಿಸಿದರೆ ಮಾತ್ರ ಕಣಕ್ಕೆ ಇಳಿಯುವ ಮನಸ್ಥಿತಿ ಹೊಂದಿದ್ದು, ಈ ಸನ್ನಿವೇಶ ಕಾಂಗ್ರೆಸ್ ,ಬಿಜೆಪಿ ಪಕ್ಷಗಳಿಗೆ ಇಲ್ಲದ ಕಾರಣ , ಆನಂದ ಅಸ್ನೋಟಿಕರ್ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿ ಆದರೂ ಆಗಬಹುದು. ಅವರಿಗೆ ಬಿಜೆಪಿ ಕದ ತೆಗೆದಿಲ್ಲ, ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವ ಭರವಸೆ ನೀಡಲ್ಲ. ಹಾಗಾಗಿ ಅವರ ನಿಲುವು ಏನೆಂದು ಸ್ಪಷ್ಟವಾಗಿಲ್ಲ.

ಗೆಲ್ಲುವ ಭರವಸೆ ಇದೆ
ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಈ ಸಲ ಕೆನರಾ ಲೋಕಸಭೆ ಕಾಂಗ್ರೆಸ್ ಪಾಲಾಗಲಿದೆ. ಅಷ್ಟರ ಮಟ್ಟಿಗೆ ನಮಗೆ ಭರವಸೆ ಇದೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿವೆ.

ಮಂಕಾಳು ವೈದ್ಯ . ಜಿಲ್ಲಾ ಉಸ್ತುವಾರಿ ಸಚಿವ ಉತ್ತರ ಕನ್ನಡ*