ಸುದ್ದಿಬಿಂದು ಬ್ಯೂರೋ
ಕಾರವಾರ ; ಕಳೆದ‌ ಕೆಲದಿನಗಳಿಂದ‌ ಸಂಪೂರ್ಣವಾಗಿ ನಿಂತು ಹೋಗಿದ್ದ ವರುಣ ಮತ್ತೆ ತನ್ನ ಅಬ್ಬರ ಮುಂದುವರೆಸಿದ್ದಾನೆ. ಉತ್ತರಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ.

ಸರಿಸುಮಾರು ಒಂದು ತಿಂಗಳಿಂದ ಸರಿಯಾದ ಮಳೆ‌ ಕಾಣದೆ. ರೈತರು ಕಂಗಾಲಾಗಿದ್ದರು, ನಾಟಿ ಮಾಡಿದ‌ ಭತ್ತದ ಸಸಿಗಳು ನೀರಿಲ್ಲದೆ‌ ಸುಟ್ಟುಹೋಗುವ ಪರಿಸ್ಥಿತಿ ಉಂಟಾಗಿತ್ತು, ಆರಂಭದಲ್ಲಿ ಸುರಿದ ಮಳೆಯಿಂದಾಗಿ ತುಂಬಿ‌ಹರಿದ ಹಳ್ಳಕೊಳ್ಳಗಳು ಬತ್ತಲಾರಂಭಿಸಿತ್ತು. ಆದರೆ ನಿನ್ನೆ ಮೊನ್ನೆಯಿಂದ ಜಿಟಿಜಿಟಿ ಸುರಿಯುತ್ತಿದ್ದ ಮಳೆ‌ ನಿನ್ನೆ ರಾತ್ರಿಯಿಂದ ಜೋರಾಗಿದೆ.

ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು 24 ಗಂಟೆಗಳ‌ ಕಾಲ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಈಗಾಗಲೆ ಸೂಚನೆ ನೀಡಿದ್ದು, ಮೀನುಗಾರರಿಗೂ ಸಹ ಮೀನುಗಾರಿಕೆ ಮಾಡಲು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ಆದರೆ ರಾತ್ರಿ ಇದ್ದ ಮಳೆಯ ಆರ್ಭಟ ಬೆಳಕು ಬಿಡುತ್ತಿದ್ದಂತೆ ಸ್ವಲ್ಪ ತನ್ನ ಆರ್ಭಟ ಕಡಿಮೆ‌ ಆದಂತೆ ಕಾಣುತ್ತಿದೆ.