ಸುದ್ದಿಬಿಂದು ಬ್ಯೂರೋ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದ್ದು, ಮೂರು ಪಕ್ಷದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ.

ಬಿಜೆಪಿಯಿಂದ ದಿನಕರ ಶೆಟ್ಟಿ, ಜೆಡಿಎಸ್ ನಿಂದ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ನಿಂದ ನಿವೇದಿತ್ ಆಳ್ವಾ ಈ ಮೂವರು ಚುನಾವಣಾ ಅಖಾಡದಲ್ಲಿದ್ದಾರೆ.

ಸೂರಜ್ ನಾಯ್ಕ ಸೋನಿ ಹಾಗೂ ದಿನಕರ ಶೆಟ್ಟಿ ಇವರಿಬ್ಬರೂ ಇದೆ ಕ್ಷೇತ್ರದವರಾಗಿದ್ದು, ನಿವೇದಿತ್ ಆಳ್ವಾ ಮಾತ್ರ ಹೊರಗಿನವರು ಎನ್ನುವ ಆರೋಪವಿದೆ. ಇನ್ನು ಕಾಂಗ್ರೆಸ್ ಟಿಕೆಟಿಗೆ 10ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು‌. ಇವರಲ್ಲಿ ಪ್ರಮುಖವಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ , ಮಂಜುನಾಥ ನಾಯ್ಕ, ಶಿವಾನಂದ ಹೆಗಡೆ ಕಡತೋಕ ಟಿಕೆಟಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು.

ಆದರೆ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದವರೇ ಅಲ್ಲದ, ಬೂತ್ ಮಟ್ಟದಲ್ಲಿ ವೈಯಕ್ತಿಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸದೆ ದೂರದ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಆಳ್ವಾ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದರು. ಆದರೆ ಕೊನೆಗಳಿಗೆಯಲ್ಲಿ ಶಾರದಾ ಶೆಟ್ಟಿ ನಾಮಪತ್ರ ವಾಪಸ್ ಪಡೆದುಕೊಂಡು ಸದ್ಯ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದಾರೆ‌.

ಇದರಿಂದಾಗಿ ಅವರ ಬೆಂಬಲಿಗರು ವಿಚಲಿತರಾಗಿದ್ದು,ಕೆಲವರು ನಿವೇದಿತ್ ಜೊತೆ ಕೈ ಜೋಡಿಸಿದ್ದಾರೆ. ಆದರೆ ಶಾರದಾ ಶೆಟ್ಟಿ ಹಾಗೂ ಇನ್ನೂ ಬೇರೆ ಬೇರೆ ಆಕಾಂಕ್ಷಿಗಳ ಜೊತೆ ಗುರುತಿಸಿಕೊಂಡು ಈಗ ಆಳ್ವಾ ಗುಂಪನ್ನ ಸೇರಿಕೊಂಡವರಿಗೆ ಅಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದುವಪಕ್ಷದ ಒಳಗಿನಿಂದಲೇ ಕೇಳಿ ಬರುತ್ತಿದೆ.

ಇನ್ನು ಬಿಜೆಪಿ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿ ಅವರಿಗೆ. ಪಕ್ಷದ ಸ್ಥಳೀಯ ಮುಖಂಡರಿಂದ ಹಿಡಿದು ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರ ಮುನಿಸಿಕೊಂಡಿದ್ದು, ಪಕ್ಷದ ಒಳಗೆ ಇದ್ದು ಅವರ ವಿರುದ್ದ ಮಸಲತ್ತು ನಡೆಸುತ್ತಿದ್ದು, ಈ ವಿಚಾರ ದಿನಕರ ಶೆಟ್ಟಿ ಅವರ ಗಮನಕ್ಕೂ ಬಂದಿದ್ದು, ಹೀಗಾಗಿ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ನಾ ಏನು ತಪ್ಪು ಮಾಡಿದ್ದೇನೆ ಎಂದು ಮತದಾರರ ಬಳಿಯೇ ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ. ಇವರ ಮಾತು ಮತದಾರರಲ್ಲೂ ಗೊಂದಲಕ್ಕೆ ಕಾರಣವಾಗಿದೆ.ಆದರೆ ಇದ್ಯಾವುದಕ್ಕೂ ಎದೆಗುಂದದ ದಿನಕರ ಶೆಟ್ರು ಕ್ಷೇತ್ರದಲ್ಲಿ ಸಂಚರಿಸಿ ಮತ ಬೇಟೆ ನಡೆಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ಕ್ಷೇತ್ರದಲ್ಲಿ ಕಳೆದ ಎರಡು ದಶಕಕ್ಕೂ ಹೆಚ್ಚಿನ ಕಾಲದಿಂದ ಇದ್ದು, ಜನರ ಪ್ರತಿಯೊಂದು ಕಷ್ಟಕ್ಕೂ ಜನರ ಜೊತೆ ನಿಂತು ಸಮಸ್ಯೆಗಳ ಪರಿಹರಿಸುತ್ತಲೇ ಬಂದಿದ್ದಾರೆ. ಇವರು ತಮ್ಮ ಬಳಿ ಯಾರೆ ಕಷ್ಟ ಹೇಳಿಕೊಂಡು ಬಂದರೂ ಅವರ ಜಾತಿ, ನನ್ನ ಬೆಂಬಲಿಗರಾ ಯಾವುದನ್ನು ಸಹ ಕೇಳದೆ ಮೊದಲು ಅವರ ಕಷ್ಟವನ್ನು ಬಗೆಹರಿಸಲು ಪ್ರಯತ್ನಿಸುತ್ತ ಬಂದಿದ್ದಾರೆ. ಹೀಗಾಗಿ ಸೂರಜ್ ನಾಯ್ಕ ಸೋನಿ ಜೊತೆ ಇಂದು ಎಲ್ಲಾ ವರ್ಗದ ಜನ ಇದ್ದು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಪ್ರಮಾಣಿಕವಾಗಿ ದುಡಿಯುತ್ತಿದ್ದಾರೆ.

ಕ್ಷೇತ್ರದಲ್ಲಿ ಈ ಬಾರಿ ಒಂದು ಕಡೆ ಹಣ ಹಂಚಿ ಗೆಲ್ಲಬಹುದು ಅಂತಾ ಇದ್ದರೆ ದಿನಕರ ಶೆಟ್ಟಿ ಅವರು ಇದು ನನ್ನ ಕೊನೆ ಚುನಾವಣೆ ಎಂದು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ತಾನು ಕಳೆದ ಎರಡು ದಶಕದಿಂದ ಯಾವುದೇ ಅಪೇಕ್ಷೆ ಇಲ್ಲದೆ ಕ್ಷೇತ್ರದಲ್ಲಿ ಮಾಡಿರುವ ಜನ ಸೇವೆಯೆ ಆಧಾರವಾಗಿಟ್ಟುಕೊಂಡು ಜನರ ಬಳಿ ಮುನ್ನುಗುತ್ತಿದ್ದಾರೆ.

ಈ ಬಾರಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಹಣಕ್ಕೆ ಕೈಚಾಚುತ್ತಾರಾ? ಎಲ್ಲಾ ಅಧಿಕಾರ ಅನುಭವಿಸಿ ಮತ್ತೆ ಅಖಾಡಕ್ಕೆ ಇಳಿದವರನ್ನು ಮತ್ತೆ ಅಧಿಕಾರಕ್ಕೆ ತರತ್ತಾರಾ? ಅಥವಾ ಎರಡು ದಶಕದಿಂದ ತನ್ನ ಕಷ್ಟಗಳನ್ನೆಲ್ಲಾ ಬದಿಗಿಟ್ಟು ಜನರ ಕಷ್ಟಕ್ಕೆ ನೆರವಾಗುತ್ತಾ ಬಂದವರನ್ನ ಈ ಬಾರಿ ಆಯ್ಕೆ ಮಾಡಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.