ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ: ನಗರದ ಬಸ್ ನಿಲ್ದಾಣದಲ್ಲಿ ಏಕಾಏಕಿ ಪಿಟ್ಸ್ ಬಂದು ನಿತ್ರಾಣನಾಗಿ ಬಿದ್ದ ಭಿಕ್ಷುಕನನ್ನು ಆಸ್ಪತ್ರೆಗೆ ದಾಖಲಿಸಿ ಸಾರಿಗೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಕಸ ಆರಿಸಿಕೊಂಡು ತಿರುಗಾಡುತ್ತಿದ್ದ ಭಿಕ್ಷುಕನಿಗೆ ಏಕಾಏಕಿ ಪಿಟ್ಸ್ ಬಂದಂತಾಗಿದೆ. ಈ ವೇಳೆ ಭಿಕ್ಷುಕನನ್ನು ಗಮನಿಸಿದ ಕಾರವಾರ ಚಿಕ್ಕಮಗಳೂರು ಮಾರ್ಗದ ಬಸ್‌ನ ಚಾಲಕ, ನಿರ್ವಾಹಕರು ಅಲ್ಲೇ ನಿಂತಿದ್ದ ಬಸ್‌ನ ಬಾಗಿಲಿನ ಕಬ್ಬಿಣ ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ.
ಈ ವೇಳೆಗಾಗಲೇ ಭಿಕ್ಷುಕ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದು, ಬಾಯಿಯಿಂದ ನೊರೆ ಬರುವ ರೀತಿ ಕಾಣಿಸಿದೆ. ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಬಳಿಯಿದ್ದ ಚಾವಿಗಳ ಗುಚ್ಚವನ್ನ ನೀಡಿದ್ದು, ಭಿಕ್ಷುಕ ಕೊಂಚ ಸುಧಾರಿಸಿಕೊಂಡು ಅಲ್ಲೇ ಮಲಗಿದ್ದಾನೆ. ಸಾರಿಗೆ ಸಿಬ್ಬಂದಿಯೂ ಆತ ಸುಧಾರಿಸಿಕೊಳ್ಳಲು ಹಾಗೇ ಬಿಟ್ಟು ಸ್ವಲ್ಪ ಸಮಯದ ಬಳಿಕ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಏಳಲು ಸಾಧ್ಯವಾಗದೇ ನಿತ್ರಾಣನಾಗಿದ್ದು, ಆತನ ಸ್ಥಿತಿ ಅರಿತ ಸಿಬ್ಬಂದಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಭಿಕ್ಷುಕನನ್ನು ಸ್ಟ್ರೆಚರ್ ಮೂಲಕ ಅಂಬ್ಯುಲೆನ್ಸ್‌ಗೆ ಹತ್ತಿಸಿಕೊಂಡು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಭಿಕ್ಷುಕ ಮದ್ಯಪಾನ ಮಾಡಿದಂತೆ ಕಂಡುಬಂದಿದ್ದು, ಇದೇ ವೇಳೆ ಪಿಟ್ಸ್ ಉಂಟಾಗಿದ್ದರಿಂದ ತೀವ್ರ ನಿತ್ರಾಣಗೊಂಡಿದ್ದ ಎಂದು ತಿಳಿದುಬಂದಿದೆ. ನಿತ್ರಾಣಗೊಂಡು ಬಿದ್ದ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ತೋರಿದ ಸಾರಿಗೆ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.