ಸುದ್ದಿಬಿಂದು ನ್ಯೂಸ್ ಡೆಸ್ಕ್

ಕಾರವಾರ: ಶಿಕ್ಷಣ ಮತ್ತು ಮಾದ್ಯಮ ಈ ಎರಡೂ ನಾನು ಅತ್ಯಂತ ಪ್ರೀತಿಸುವ ಕ್ಷೇತ್ರಗಳಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಅವರು ಅಂಕೋಲಾದ ನಾಡವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‌ನ ದೀಪಧಾರಣ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.

ಸಮಾಜದಲ್ಲಿ ಮಹತ್ವದ ಕ್ಷೇತ್ರಗಳೆಂದು ಗುರುತಿಸುವ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಮಹತ್ವದ್ದಾಗಿವೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದ ಇಲ್ಲಿಯವರೆಗೆ ಮಾದ್ಯಮ ಕ್ಷೇತ್ರ ನಡೆದುಬಂದಿದೆ. ನಮ್ಮ ದೇಶ, ಸಮಾಜ, ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಯುವಲ್ಲಿ ಮಾಧ್ಯಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ನನಗೆ ಪ್ರಮುಖ ಪತ್ರಿಕೆಗಳಲ್ಲಿ ಸಂಪಾದಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರೂ, ಜಿಲ್ಲೆಯೊಂದಿಗೆ ಬೆರೆಯುವ ಸಣ್ಣ ಅವಕಾಶ ಸಿಕ್ಕರೂ ತೊಡಗಿಸಿಕೊಳ್ಳಲು ನಾನು ಸದಾಕಾಲ ಪ್ರಯತ್ನಿಸುತ್ತೇನೆ.

ಜಿಲ್ಲೆಗೆ ಶೈಕ್ಷಣಿಕವಾಗಿ ಏನನ್ನಾದರೂ ಮಾಡಬೇಕು ಎನ್ನುವ ಯೋಚನೆ ಹಲವು ವರ್ಷಗಳಿಂದ ಇತ್ತು. ಶಿಕ್ಷಣ ಸಂಸ್ಥೆಯೊಂದನ್ನ ಪ್ರಾರಂಭಿಸಬೇಕು ಎನ್ನುವ ವಿಚಾರದಲ್ಲಿರುವಾಗಲೇ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಒದಗಿಬಂತು. ಜಿಲ್ಲೆ ಹೇಗಿರಬೇಕು ಎನ್ನುವ ಕನಸ್ಸನ್ನು ಹೊಂದಿದ್ದಂತಹ ಕೆಲವೇ ಕೆಲವು ನಾಯಕರಲ್ಲಿ ವಿಶ್ವದರ್ಶನ ಸಂಸ್ಥಾಪಕರಾದ ದಿವಂಗತ ಉಮೇಶ ಭಟ್ ಅವರು ಒಬ್ಬರಾಗಿದ್ದರು. ಬಹಳ ಪರಿಶ್ರಮಪಟ್ಟು ಈ ಸಂಸ್ಥೆಯನ್ನ ಪ್ರಾರಂಭಿಸಿ ಒಂದು ಹಂತಕ್ಕೆ ತೆಗೆದುಕೊಂಡು ಬಂದಿದ್ದರು. ಅವರು ಅಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅದರ ಬಾಗಿಲುಗಳನ್ನು ತೆರೆಯುವ ಸುವರ್ಣಾವಕಾಶ ಒದಗಿಬಂದಿದ್ದು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.

ವಿಶ್ವದರ್ಶನ ಸಂಸ್ಥೆಗಾಗಿ ತಾಲ್ಲೂಕಿನ ಹೊಸಗದ್ದೆಯಲ್ಲಿ ಉಮೇಶ ಭಟ್ ಅವರು ತೆಗೆದುಕೊಂಡಿದ್ದ ಜಾಗಕ್ಕೆ ಕಾನೂನಿನ ತೊಡಕುಗಳು ಎದುರಾಗಿದ್ದವು. ಇದೀಗ ಸರ್ಕಾರದ ಮಟ್ಟದಲ್ಲಿ ಎಲ್ಲ ಕಾನೂನಿನ ತೊಡಕುಗಳು ನಿವಾರಣೆಯಾಗಿ ಒಂದು ವರ್ಷದ ಹಿಂದೆ ಸಂಸ್ಥೆಗೆ ಜಾಗ ಮರಳಿ ಲಭಿಸಿದೆ. ಆ ಜಾಗದಲ್ಲಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ನಿರ್ಮಿಸುವ ಯೋಜನೆಗಳಿದ್ದು ಮುಂದಿನ ದಿನಗಳಲ್ಲಿ ಅದನ್ನು ಬಿಎಸ್‌ಸಿ ನರ್ಸಿಂಗ್‌ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ನರ್ಸಿಂಗ್ ಶಾಲೆ, ಹಾಸ್ಟೆಲ್ ನಡೆಯುತ್ತಿದ್ದು ಹಲವು ಗಣ್ಯರು ಸಹಕಾರ ನೀಡುತ್ತಿದ್ದಾರೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು.

ನರ್ಸಿಂಗ್ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ಕೊಡುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿಭಾನ್ವಿತ, ಸುಸಂಸ್ಕೃತ ವಿದ್ಯಾರ್ಥಿಗಳು ಇದ್ದಾರೆ. ಹಣ ಇಲ್ಲ ಎನ್ನುವ ಒಂದೇ ಕಾರಣಕ್ಕೆ ಉತ್ತಮ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎನ್ನುವ ಕಲ್ಪನೆ ನಮ್ಮದಾಗಿತ್ತು. ಜಿಲ್ಲೆಗೆ ಏನಾದರೂ ಕಿಂಚಿತ್ ಸೇವೆ ಸಲ್ಲಿಸಬೇಕು ಅಂತಿದ್ರೆ ಅದು ಶಿಕ್ಷಣದ ಮೂಲಕವೇ ಎನ್ನುವ ತೀರ್ಮಾನ ನಾವು ಮಾಡಿದ್ದೆವು. ವಿಶ್ವದರ್ಶನ ಸಂಸ್ಥೆ ಪ್ರಾರಂಭಿಸಿದ ಬಳಿಕ ನಮಗೆ ಅಭೂತಪೂರ್ವ ಯಶಸ್ಸು ಸಿಗುತ್ತಾ ಹೋಯಿತು. ಶಿಕ್ಷಣ ಸಂಸ್ಥೆ ಆರಂಭಿಸುವ ವ್ಯಕ್ತಿ ಶಾಶ್ವತವಲ್ಲ, ಸಂಸ್ಥೆ ಯಾವಾಗಲೂ ಶಾಶ್ವತವಾಗಿರಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಚ್.ಎಸ್.ಶೆಟ್ಟಿ ಅವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಗಡಿಯಲ್ಲಿ ಯೋಧ ಯಾವ ರೀತಿ ವೈರಿಗಳ ವಿರುದ್ಧ ಹೋರಾಡಿ ದೇಶವನ್ನು ಕಾಯುತ್ತಾನೋ, ಅದೇ ರೀತಿ ಕಣ್ಣಿಗೆ ಕಾಣದ ವೈರಿಗಳಾದ ಬೇರೆ ಬೇರೆ ರೀತಿಯ ರೋಗಾಣುಗಳ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ್ದೀರಿ. ಇದು ನಿಮ್ಮ ಕುಟುಂಬ, ಸ್ನೇಹಿತರು, ಸಂಬಂಧಿಕರನ್ನೂ ಮೀರಿ ವೃತ್ತಿಗೆ ಬದ್ಧವಾಗಿರುತ್ತೀರಿ ಎನ್ನುವ ಪ್ರತಿಜ್ಞೆ ಎಂದರು. ವೈದ್ಯಕೀಯ ಸೇವೆ ಸಲ್ಲಿಸುವ ಈ ವೃತ್ತಿಯನ್ನು ಆಯ್ದುಕೊಳ್ಳುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ನೀವು ತೆಗೆದುಕೊಂಡಿರುವ ಸೇವೆ ಎಲ್ಲದಕ್ಕಿಂತ ಮಿಗಿಲಾದದ್ದು. ಕೊರೊನಾ ಸಂದರ್ಭದಲ್ಲಿ ನಾವೆಲ್ಲರೂ ಇದನ್ನು ನೋಡಿದ್ದೇವೆ. ಮುಂದುವರೆದ ರಾಷ್ಟ್ರಗಳಿಗಿಂತ ಉತ್ತಮವಾಗಿ ಕೊರೊನಾ ನಿರ್ವಹಣೆಯಲ್ಲಿ ಯಶಸ್ಸನ್ನು ಸಾಧಿಸಲು ನಿಮ್ಮಂತೆ ನರ್ಸಿಂಗ್ ವೃತ್ತಿ ಆಯ್ದುಕೊಂಡವರಿಂದಲೇ ಸಾಧ್ಯವಾಯಿತು ಎಂದರು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಅಂಕೋಲಾ ತಾಲ್ಲೂಕು ವೈದ್ಯಾಧಿಕಾರಿ ಡಾ. ನಿತಿನ್ ಹೊಸಮೇಲಕರ್ ಮಾತನಾಡಿ, ನರ್ಸಿಂಗ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಮುಂದಿನ ದಿನಗಳಲ್ಲಿ ನಿಮ್ಮ ವೃತ್ತಿಗೆ ಪೂರಕವಾಗಿರುವಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಶೈಕ್ಷಣಿಕ ಅರ್ಹತೆಯನ್ನ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ. ಹಣ ಅಥವಾ ವಸ್ತುಗಳಿಂದ ನಾವು ಬೇರೆಯವರಿಗೆ ಕ್ಷಣಿಕ ಸಹಾಯವನ್ನು ಮಾಡಬಹುದು. ಆದರೆ, ನಾವು ಕಲಿತ ವಿದ್ಯೆಯಿಂದ ಇಡೀ ಕುಟುಂಬವನ್ನೇ ಮುನ್ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆರ್ಥಿಕ ವ್ಯವಹಾರಗಳನ್ನು ನಿರ್ವಹಣೆ ಮಾಡುವ ಚಾರ್ಟೆಡ್ ಅಕೌಂಟೆಂಟ್ ವಿಘ್ನೇಶ್ವರ ಗಾಂವ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಅವರು ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಬಳಿಕ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ರಾಜ್ಯದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.