ಭಟ್ಕಳ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳಷ್ಟೆ ಬಾಕಿ ಉಳಿದಿದ್ದು, ಜಿಲ್ಲೆಯ ಶಿರಸಿ ಹಾಗೂ ಭಟ್ಕಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಎಸ್ ಡಿಪಿಐ ಸಂಘಟನೆ ಮುಂದಾಗಿದ್ದು, ಈ ಎರಡು ಕ್ಷೇತ್ರದಲ್ಲಿ ಎಸ್ ಡಿಪಿಐ ತಮ್ಮ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸಲು ಸಜ್ಜಾಗಿದೆ.

ಮುಸ್ಲಿಂ ಮತದಾರರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಎಸ್ ಡಿಪಿಐ ಇದೀಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುನೀಲ್ ನಾಯ್ಕ ಅವರಿಗೆ ಟಕ್ಕರ್ ನೀಡಲು ರಣತಂತ್ರ ರೂಪಿಸಿದೆ‌. ಇತ್ತ ಬಿಜೆಪಿ  ಧರ್ಮ ಅಸ್ತ್ರ ಬಳಿಸಿ ಚುನಾವಣೆ ನಡೆಸುತ್ತಿದ್ದೆಯೋ ಅದೆ ರೀತಿ ಎಸ್.ಡಿಪಿಐ ಸಹ ಧರ್ಮದ ಅಸ್ತ್ರವನ್ನ ಬಳಕೆ ಮಾಡಲು ಮುಂದಾಗಿದೆ.

ಕರಾವಳಿ ಭಾಗದಲ್ಲಿ ಕೋಮಸಂಘರ್ಷಗಳು ಹಲವು ಪಕ್ಷಗಳಿಗೆ ವರವಾದರೇ ಸಂಘಟನೆಗಳಿಗೆ ತಮ್ಮ ಅಸ್ಥಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಹ ಸಹಕಾರಿಯಾಗುತ್ತಿದ್ದು ಎಸ್ ಡಿಪಿಐ ಈ ಬಾರಿಯ ಚುನಾವಣೆಯಲ್ಲಿ ತಮ್ಮವರನ್ನು ಕಣಕ್ಕಿಳಿಸುವ ಮಟ್ಟಿಗೆ ಬೆಳದಿವೆ.

ಭಟ್ಕಳ ಮತ್ತು ಶಿರಸಿ ಕ್ಷೇತ್ರದಲ್ಲಿ ಹಿಂದೂ ಸಂಘಟನೆಯಂತೆಯೇ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆ ಸಹ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದು ಗ್ರಾಮಪಂಚಾಯ್ತಿ, ಪುರಸಭೆಗಳಲ್ಲಿ ಎಸ್.ಡಿಪಿ.ಐ ತಮ್ಮವರನ್ನು ಕಣಕ್ಕಿಳಿಸಿ ಒಟ್ಟು 9 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಈ ಯಶಸ್ವಿನ ನಂತರ  ಇದೇ ಮೊದಲಬಾರಿಗೆ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದವಾಗಿದ್ದು ಭಟ್ಕಳದಿಂದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೋಫಿಕ್ ಬ್ಯಾರಿ ರವರನ್ನು ಕಣಕ್ಕಿಳಿಸಲಿದ್ರೆ ಶಿರಸಿಯಲ್ಲಿ ಹಿಂದೂ ಮುಖಂಡರನ್ನೇ ಕಣಕ್ಕಿಳಿಸಲು ಸನ್ನದ್ದವಾಗಿದೆ.

ಭಟ್ಕಳ ಹಾಗೂ ಶಿರಸಿ ಈ ಎರಡು ಕ್ಷೇತ್ರಗಳಲ್ಲಿ ಇದೇ ಮೊದಲಬಾರಿಗೆ ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತಿದ್ದು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು‌ ಮುಂದಾಗಿದೆ.