ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:- ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ನವರಿಗೆ ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ. ಪಾರದರ್ಶಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೆ ಹತಾಶರಾಗಿರುವ ಅವರು, ಇದೀಗ ಪ್ರಧಾನಿ ಮೋದಿ ಅವರ ತಂದೆಯ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ತಾಯಿಯ ಬಗ್ಗೆ ಮಾತನಾಡುತ್ತಿದ್ದವರು ಈಗ ತಂದೆಯ ಬಗ್ಗೆ ಟೀಕೆ ಮಾಡುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದವರ ಇಂತಹ ಹೇಳಿಕೆಗಳು ವ್ಯರ್ಥಾಲಾಪವಷ್ಟೇ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಗೆಲುವು ಅಸಾಧ್ಯ ಎಂಬುದು ಅರಿವಾದಾಗ ತಂದೆ-ತಾಯಿಯರನ್ನು ಹೀಯಾಳಿಸುವ ನೈತಿಕ ಅಧಃಪತನಕ್ಕೆ ಇಳಿದಿರುವುದು ಖಂಡನೀಯವಾಗಿದೆ. ಹಿರಿಯರಾಗಿ ಅವರ ಬಾಯಿಂದ ಇಂತಹ ಮಾತುಗಳು ಹೊರಬರುವುದು ಶೋಭೆ ತರದು ಎಂದು ತಿಳಿಸಿದ್ದಾರೆ.
ಯಾವುದೇ ತತ್ವ, ಸಿದ್ಧಾಂತಗಳಿಗೆ ಬದ್ಧತೆ ಇಲ್ಲದ ಪಕ್ಷದವರು, ನಿಸ್ವಾರ್ಥವಾಗಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಜನನಾಯಕರ ತಂದೆ-ತಾಯಿಯರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಅವರ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ಹಾಗೂ ಕುಟುಂಬದ ವಿಚಾರಗಳನ್ನು ಎಳೆದು ತಂದು ಟೀಕಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
ಇಂತಹ ಹೇಳಿಕೆಗಳು ಮತ್ತು ವರ್ತನೆಗಳು ಮುಂದುವರಿದರೆ ಅವುಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ರೂಪಾಲಿ ಎಸ್. ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ/ಕುಮಟಾ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ: ಸ್ಕೂಟರ್ ಕಳ್ಳನ ಬಂಧನ

