ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ–ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ವಿರುದ್ಧ ನಿಂತು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಪ್ರಚಾರ ನಡೆಸಿದ್ದ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್, ಇದೀಗ ಅಂದು ತಾನೇ ಬೆಂಬಲಿಸಿದ ಶಾಸಕ ಸತೀಶ್ ಸೈಲ್ ವಿರುದ್ಧ ಬಹಿರಂಗವಾಗಿ ಟೀಕಾ ಪ್ರಹಾರ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಬದಲು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಪ್ರಚಾರ ನಡೆಸಿರುವದು ಎಲ್ಲಿಯೂ ಗುಟ್ಟಾಗಿ ಉಳಿದುಕೊಂಡಿಲ್ಲ. ಕಳೆದ ಚುನಾವಣೆ ವೇಳೆ ಇದೇ ಅಸ್ನೋಟಿಕರ್ ಹೋದಕಡೆಯಲ್ಲೆಲ್ಲಾ ನಾನು ಸತೀಶ್ ಸೈಲ್ ಇಬ್ನರೂ “ರಾಮ ಲಕ್ಷ್ಮಣ” ಇದ್ದಂತೆ ಎಂದು ಹೇಳಿಕೊಂಡು ಸೈಲ್ ಪರ ಪ್ರಚಾರ ಮಾಡಿರೋದು ಅಂದಿನ ಸಾಕಷ್ಡು ಮಾಧ್ಯಮಗಳಲ್ಲಿ ಸುದ್ದಿ ಆಗಿರೋದನ್ನ ಕ್ಷೇತ್ರದ ‌ಮತದಾರರು ಇಂದಿಗೂ ಮರೆತ್ತಿಲ್ಲ. ಜೆಡಿಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದರು ಆದರೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದೆ ಇನ್ನೊಂದು ಪಕ್ಷದ ಪರ ಯಾಕಾಗಿ ಪ್ರಚಾರ ಮಾಡಿದ್ದರು ಎನ್ನುವುದು ಇಂದಿಗೂ ಕ್ಷೇತ್ರದ ಪ್ರಜ್ಞಾನವಂತ ಮತದಾರರು ಅರ್ಥಮಾಡಿಕೊಂಡತಿದೆ.

ತಾವಿಬ್ಬರೂ “ರಾಮ–ಲಕ್ಷ್ಮಣ”, “ಜೋಡೆತ್ತು” “ಡಬಲ್ ಎಂಜಿನ್” ಎಂದೇಲ್ಲಾ ಹೇಳಿಕೊಂಡಿರೋದಲ್ಲದೆ., ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಶಾಸಕ ಸತೀಶ್ ಸೈಲ್ ವಿರುದ್ಧ ಅಸ್ನೋಟಿಕರ್ ಅವರು ತಿರುಗಿಬಿದ್ದಿರುವುದು ಯಾಕೆ ಎನ್ನುವುದನ್ನ ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಅಂದು ಸೈಲ್ ಅವರ ಗೆಲುವಿಗಾಗಿ ಪಣತೊಟ್ಟು ಪ್ರಚಾರ ನಡೆಸಿದ್ದವರು ಇಂದು ಅವರ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿರುವುದು ಏಕೆ? ಅಂದು “ರಾಮ–ಲಕ್ಷ್ಮಣ” ಹಾಗೂ “ಜೋಡೆತ್ತು” ಎಂದು ಬಣ್ಣಿಸಿದ್ದ ಸಂಬಂಧದಲ್ಲಿ ಇದೀಗ ಬಿರುಕು ಮೂಡಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನು, ತಮ್ಮದೇ ಪಕ್ಷದ ಅಭ್ಯರ್ಥಿಯ ವಿರುದ್ಧ ನಿಂತು ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಿದರೆ, ಅದು ಪಕ್ಷದ ತತ್ವ, ಸಿದ್ಧಾಂತ ಮತ್ತು ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದ ಬಗ್ಗೆ ಮತದಾರರಲ್ಲಿ ಯಾವ ಸಂದೇಶ ನೀಡಲಿದೆ? ಎನ್ನುವ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ.

ಚುನಾವಣೆಯ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು ಹಾಗೂ ಇದೀಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ನಡುವಿನ ವ್ಯತ್ಯಾಸವನ್ನು ಗಮನಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಕಾರವಾರ–ಅಂಕೋಲಾ ಕ್ಷೇತ್ರದ ರಾಜಕೀಯ ಸಮೀಕರಣಗಳು ಯಾವ ರೂಪ ಪಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.

ಅಸ್ನೋಟಿಕರ್ ಅವರ ಇತ್ತೀಚಿನ ಆರೋಪಗಳಿಗೆ ಶಾಸಕ ಸತೀಶ್ ಸೈಲ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬುದೂ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.