ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನಿರ್ವಾಹಕರೊಬ್ಬರ ಸ್ಕೂಟರ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಕುಮಟಾ ಪೊಲೀಸರು, ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸೋಂಪುರ ನಿವಾಸಿ, ಕುಮಟಾದ ಕೆಎಸ್‌ಆರ್‌ಟಿಸಿ ನಿರ್ವಾಹಕ ಶಿವಮೂರ್ತಿ ಎನ್.ಎಸ್. (37) ಅವರು ಅ.20ರಂದು ರಾತ್ರಿ 9.15ರ ಸುಮಾರಿಗೆ ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್‌ (ಕೆಎ-12/ಎಸ್-1847) ಅನ್ನು ಕುಮಟಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಊರಿಗೆ ತೆರಳಿದ್ದರು. ಊರಿನಿಂದ ಮರಳಿ ಬಂದಾಗ ಸ್ಕೂಟರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು. ಈ ಬಗ್ಗೆ ಅ.24ರಂದು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಲಭ್ಯವಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಸುಳಿವುಗಳ ಆಧಾರದಲ್ಲಿ ತನಿಖೆ ನಡೆಸಿ, ಶಿರಸಿ ತಾಲೂಕಿನ ಕೊಡ್ಲಗದ್ದೆ ಸಮೀಪದ ಜಡ್ಡಿಗದ್ದೆ ನಿವಾಸಿ ಮಹಮ್ಮದ್ ಆಸೀದ್ (21) ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಆರೋಪಿಯಿಂದ ಸುಮಾರು ₹20 ಸಾವಿರ ಮೌಲ್ಯದ ಕಳುವಾಗಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 224/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 303(2)ರ ಪ್ರಕಾರ ಪ್ರಕರಣ ದಾಖಲಾಗಿತ್ತು.

ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ., ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಸುಬ್ರಹ್ಮಣ್ಯ ಹೆಗಡೆ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್‌ಪಿ ಗಿರೀಶ್ ಎಸ್.ವಿ. ಅಭಿನಂದಿಸಿದ್ದಾರೆ.

ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಕಳುವಾದ ವಾಹನವನ್ನು ವಶಪಡಿಸಿಕೊಂಡ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ/ಭೂತಾಯಿಗೆ ಉಡಿ ತುಂಬಿ, ಚರಗ ಚೆಲ್ಲಿ ಸಂಭ್ರಮಿಸಿದ ಬೆಡಸಗಾಂವ ರೈತರು