ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:ನ 21 ರಿಂದ ಮೂರು ದಿನಗಳ ಕಾಲ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ರಾಜ್ಯಮಟ್ಟದ ಮತ್ಸ್ಯ ಮೇಳೆ ಕಾರ್ಯಕ್ರಮ ತಾಲೂಕಿನ ಮುರ್ಡೇಶ್ವರದ ಪ್ರಸಿದ್ದ ಆರ್. ಎನ್. ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದೆ.
ಪ್ರತಿ ವರ್ಷ, ನವೆಂಬರ್ 21 ರಂದು, ಮೀನುಗಾರಿಕೆ ಸಮುದಾಯಗಳು,ಶಿಕ್ಷಣ ತಜ್ಞರು, ಪರಿಸರ ತಜ್ಞರು, ನೀತಿ ನಿರೂಪಕರು,ವಿವಿಧ ಪಾಲುದಾರರು ಸೇರಿದಂತೆ ಜಾಗತಿಕವಾಗಿ “ವಿಶ್ವ ಮೀನುಗಾರಿಕೆ ದಿನ’ವನ್ನು ಆಚರಿಸಲಾಗುತ್ತಿದೆ. ಮೀನುಗಾರಿಕೆ ಮತ್ತು ಮೀನುಕೃಷಿಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳಿಗೆ ಅರ್ಥಪೂರ್ಣ, ಫಲಿತಾಂಶ-ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲು ಮುಕ್ತ ಅವಕಾಶವಾಗಿರುತ್ತದೆ.
ಮೀನುಗಾರಿಕೆ ವಲಯವು ವೇಗವಾಗಿ ಬೆಳೆಯುತ್ತಿರುವ ವಲಯವಾಗಿದ್ದು, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಹೆಚ್ಚುವರಿ ಪ್ರೋಟೀನ್ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಹಸಿವು ಮತ್ತು ಅಪೌಷ್ಟಿಕತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ವರ್ಷ, ವಿಶ್ವ ಮೀನುಗಾರಿಕೆ ದಿನದ ಜೊತೆಗೆ, ನ21ರಿಂದ 23 ನವೆಂಬರ್ 2024ರ ವರೆಗೆ ಮುರುಡೇಶ್ವರದಲ್ಲಿ ಬೃಹತ್ “ಮತ್ಸಮೇಳ-2024” ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ದೇಶದಲ್ಲಿ 3,246 ಪ್ರಭೇಧದ ಮೀನುಗಳು ಮತ್ತು ಚಿಪ್ಪುಮೀನುಗಳೊಂದಿಗೆ ವಿಶ್ವದ ಮೀನಿನ ಶೇ. 10% ಕ್ಕಿಂತ ಹೆಚ್ಚು ಜೀವವೈವಿಧ್ಯದ ನೆಲೆಯಾಗಿದೆ. ಇದರಲ್ಲಿ 1,569 ಸಾಗರದ ಪ್ರಭೇಧಗಳು, 15 ಉಪ್ಪುನೀರಿನ ಪ್ರಭೇಧಗಳು, 961 ಸಿಹಿನೀರಿನ ಪ್ರಭೇಧಗಳು, ಉಪ್ಪು ಮತ್ತು ಸಿಹಿನೀರಿನ ಎರಡರಲ್ಲೂ ಬೆಳೆಯುವ 108 ಪ್ರಭೇಧಗಳು, ಉಪ್ಪು ಮತ್ತು ಸಮುದ್ರದ ನೀರಿನಲ್ಲಿನ 392 ಮತ್ತು ಎಲ್ಲಾ ನೀರಿನ ಪ್ರಕಾರಗಳಲ್ಲಿ ಕಂಡುಬರುವ 201 ಪ್ರಭೇಧಗಳು ಸೇರಿವೆ. ದೇಶದ ಮೀನು ಉತ್ಪಾದನೆಯು ಸಮುದ್ರ ಮೀನುಗಾರಿಕೆಯಿಂದ 4.1 ಮಿಲಿಯನ್ ಟನ್ ಗಳು ಮತ್ತು ಒಳನಾಡು ಮೀನುಗಾರಿಕೆಯಿಂದ 13.44ಮಿಲಿಯನ್ ಟನ್‌ಗಳು, ಒಟ್ಟು 17.54ಮಿಲಿಯನ್ ಟನ್‌ಗಳನ್ನು ಉತ್ಪಾದಿಸಲಾಗುತ್ತಿದೆ.
30 ದಶಲಕ್ಷಕ್ಕೂ ಹೆಚ್ಚು ಜನರು ವಿವಿಧ ಮೀನುಗಾರಿಕೆ ಮತ್ತು ಜಲಕೃಷಿ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಈ ವಲಯವು ವಾರ್ಷಿಕವಾಗಿ ಅಂದಾಜು ₹61,534 ಕೋಟಿಗಳನ್ನು ಕೊಡುಗೆ ನೀಡುತ್ತಿದ್ದು, ರಾಷ್ಟ್ರೀಯ ಜಿಡಿಪಿ ಯ 1.07% ಮತ್ತು ಕೃಷಿ ಜಿಡಿಪಿಯ 6.72%ನಷ್ಟಿದೆ.
ಕರ್ನಾಟಕವು ಪ್ರಮುಖ ಮೀನುಗಾರಿಕಾ ರಾಜ್ಯವಾಗಿದ್ದು, 83 ಜಲಾಶಯಗಳು, 3946 ಇಲಾಖಾ ಕೆರೆಗಳು ಮತ್ತು 24319 ಗ್ರಾಮ ಪಂಚಾಯತಿ ಕೆರೆಗಳನ್ನು ಹೊಂದಿದ್ದು, ಒಟ್ಟು 5.7 ಲಕ್ಷ ಹೆಕ್ಟೇರ್‌ಗಳ ಜಲ ವಿಸ್ತೀರ್ಣ ಪ್ರದೇಶವನ್ನು ಒಳಗೊಂಡಿದೆ. ರಾಜ್ಯವು 87000 ಚ.ಕಿಮೀ ವಿಶೇಷ ಆರ್ಥಿಕ ವಲಯ, 27000 ಚ.ಕಿ.ಮೀ ಖಂಡಾವರಣ ಪ್ರದೇಶ, 320-ಕಿಲೋಮೀಟರ್ ಕರಾವಳಿ ತೀರ ಮತ್ತು 5,813 ಕಿಲೋಮೀಟರ್ ನದಿ ಭಾಗಗಳನ್ನು ಒಳಗೊಂಡಿದೆ. ವಾರ್ಷಿಕವಾಗಿ 1 ರಿಂದ 1.2ಮಿಲಿಯನ್ ಟನ್ ಮೀನು ಉತ್ಪಾದಿಸಲಾಗುತ್ತಿದೆ ಮತ್ತು ರೂ.4048.99 ಕೋಟಿ ಮೌಲ್ಯದ 2.48 ಲಕ್ಷ ಮೆಟ್ರಿಕ್ ಟನ್ ಮೀನುಗಳನ್ನು ರಫ್ತು ಮಾಡಲಾಗುತ್ತದೆ.
ಕರ್ನಾಟಕದ ಮೀನುಗಾರಿಕೆ ಇಲಾಖೆಯು ಅತ್ಯಧಿಕ ಸಂಖ್ಯೆಯ ಮೀನುಗಾರಿಕೆ ಪದವೀದರರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಇಲಾಖೆಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ. 2022 ರಲ್ಲಿ ಭಾರತ ಸರ್ಕಾರದ ಮೀನುಗಾರಿಕೆ ಮತ್ತು ಹೈನುಗಾರಿಕೆ ಇಲಾಖೆಯು ನೀಡುವ “ಅತ್ಯುತ್ತಮ ಕರಾವಳಿ ರಾಜ್ಯ ಪ್ರಶಸ್ತಿ ಯನ್ನು ಸಹ ಇಲಾಖೆಯು ಪಡೆದುಕೊಂಡಿದೆ.
ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ (PMMSY) ಅನುಷ್ಠಾನದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಮೀನುಗಾರಿಕೆ ಇಲಾಖೆಯು ಅಲಂಕಾರಿಕ ಮೀನು ವ್ಯಾಪಾರವನ್ನು ಉತ್ತೇಜಿಸಲು ಹೆಸರಘಟ್ಟದಲ್ಲಿ “ಕ್ಯಾರಂಟೈನ್ ಘಟಕ” ವನ್ನು ಸ್ಥಾಪಿಸಿದೆ ಮತ್ತು ಮೈಸೂರು ಬಳಿ ಕರಿಮುದ್ರನಹಳ್ಳಿಯಲ್ಲಿ ಮತ್ತು ಹೆಸರಘಟ್ಟದಲ್ಲಿ “ಗಿಫ್ಟ್ ತಿಲಾಪಿಯಾ” ಹ್ಯಾಚರಿಗಳನ್ನು ಸ್ಥಾಪಿಸಿದೆ.
ಅತಿಯಾದ ಮೀನುಗಾರಿಕೆಯಿಂದ ಕ್ಷೀಣಿಸುತ್ತಿರುವ ಮೀನುಹಿಡುವಳಿ, ಮೀನುಮರಿಗಳನ್ನು ಹಿಡಿಯುವ ಸಣ್ಣ ಗಾತ್ರದ ಬಲೆ ಬಳಕೆ, ಅನೇಕ ಉದ್ದೇಶಿತವಲ್ಲದ ಮೀನು ಹಿಡುವಳಿ, ಮಳೆಗಾಲದ ಮೀನುಗಾರಿಕೆ, ಪರಿಸರ ಮಾಲಿನ್ಯದಿಂದ ಸಮುದ್ರ ಮೀನು ಉತ್ಪಾದನೆಯು ಕಡಿಮೆಯಾಗುತ್ತಿದ್ದು ಸದರಿ ವಲಯದಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚಿಸುವುದು ಒಂದು ಸವಾಲಾಗಿರುತ್ತದೆ. ಆಫ್ರಿಕನ್ ಕ್ಯಾಟ್ ಫಿಶ್‌ನಂತಹ ವಿದೇಶಿ ಜಾತಿಗಳ ಪರಿಚಯ ಒಳನಾಡು ಮೀನುಗಾರಿಕೆಯಲ್ಲಿ ಪ್ರಮುಖ ಸಮಸ್ಯೆಗಳಾಗಿವೆ.
ಈ “ವಿಶ್ವ ಮೀನುಗಾರಿಕೆ ದಿನಾಚರಣೆಯು ಮೀನುಗಾರಿಕೆಯನ್ನು ಸುಸ್ಥಿರತೆಯತ್ತ ಕೊಂಡೊಯ್ಯಲು ಮತ್ತು ಇದರಿಂದ ನಾವು ಭವಿಷ್ಯದಲ್ಲಿ ಈ ಮತ್ಸ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಸುಸ್ಥಿರ ಮೀನುಗಾರಿಕೆಯೆಡೆಗೆ ಸಾಗಲು ಸಹಕಾರಿಯಾಗಲಿದೆ.
ಮತ್ಸಮೇಳ-2024
ವಿಶ್ವ ಮೀನಗಾರಿಕೆ ದಿನಾಚರಣೆ ಹಿನ್ನಲೆಯಲ್ಲಿ ಕರಾವಳಿ ಪಟ್ಟಣವಾದ ಮುರುಡೇಶ್ವರದಲ್ಲಿ ಮತ್ಸಮೇಳ-2024 ನಡೆಯುತ್ತಿದ್ದು, ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು 60 ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಕಾರಿಸ್ಟ್‌ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ.
ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. ಅದೇ ಸಮಯದಲ್ಲಿ, ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿಸಲಿದ್ದು ಮತ್ತು ಪ್ರಗತಿಪರ ರೈತರು ತಮ್ಮ ಯಶಸ್ಸಿನ ಯಶೋಗಾಥೆಗಳನ್ನು ಹಂಚಿಕೊಳ್ಳಲಿದ್ದಾರೆ. ನಂತರ ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
“ಮತ್ಸಮೇಳ-2024″ನ ಪ್ರಮುಖ ಆಕರ್ಷಣೆಗಳು
-ಅಕ್ಟೋರಿಯಂ ಗ್ಯಾಲರಿ
-ಸುರಂಗ ಅಕ್ಕೇರಿಯಂ
-ಸರ್ಕಾರಿ ಸಂಸ್ಥೆಗಳ ಮಳಿಗೆಗಳು
-ಮೀನುಗಾರಿಕೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಮಳಿಗೆಗಳು
-ಫೀಡ್ ಕಂಪನಿಗಳು ಸಮುದ್ರ ಕಳೆ ಪ್ರದರ್ಶನ ತಾಂತ್ರಿಕಗೋಷ್ಠಿಗಳು
-ಯಶಸ್ಸಿನ ಯಶೋಗಾಥೆಗಳು
-ಮೀನು ಆಹಾರ ಮಳಿಗೆಗಳು
-ಮನೋರಂಜನೆ
-ಅಲಂಕಾರಿಕ ಮೀನು ಮಾರಾಟ
ಸಿಎಂ, ಡಿಸಿಎಂ ಆಗಮನ
ಮೀನುಗಾರಿಕಾ ಕ್ಷೇತ್ರದ ಮಹತ್ವವನ್ನು ಗುರುತಿಸಿ ಮತ್ತು ಮೀನುಗಾರರ ನೈತಿಕ ಸೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ “ಮತ್ಸಮೇಳ-2024” ಕಾರ್ಯಕ್ರಮವನ್ನು ನವೆಂಬರ್ 21, 2024 ರಂದು ಸಂಜೆ 4:00 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಮೀನುಗಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರಿಂದ ಮತ್ಸ್ಯ ಮೇಳ ಸ್ಥಳ ಪರಿಶೀಲನೆ
ನವೆಂಬರ್ 21 ರಿಂದ 23 ರ ತನಕ ನಡೆಯುವ ಮತ್ಸ್ಯ ಮೇಳದ ಕಾರ್ಯಕ್ರಮದ ಪೂರ್ವ ತಯಾರಿಯ ವೀಕ್ಷಣೆಗಾಗಿ ಶನಿವಾರದಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಇಲ್ಲಿನ ಮುರುಡೇಶ್ವರದ ಗಾಲ್ಫ್ ರೆಸಾರ್ಟ್ ಮೈದಾನಕ್ಕೆ ಭೇಟಿ ನೀಡಿ ಸಂಪೂರ್ಣ ರೂಪರೇಷೆಯನ್ನು ಗಮನಿಸಿ ಬರುವಂತಹ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ.
ಗಮನಿಸಿ