ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಧಾರವಾಡದಿಂದ ದಾಂಡೇಲಿಗೆ ಬರುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬವರೇ ಹೃದಯಘಾತಕ್ಕೊಳಗಾದ ಪ್ರಯಾಣಿಕರಾಗಿದ್ದಾರೆ. ಇವರು ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ ಮಾಹಿತಿಯನ್ನು ನೀಡಿದ್ದಾರೆ.

ಕುಳಿತಲ್ಲೇ ಮಲಗಿದ್ದ ಸ್ಥಿತಿಯಲ್ಲಿದ್ದ ಇವರು ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ತರಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ