suddibindu.in
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಭಟ್ಕಳ, ಕುಮಟಾ,ಹೊನ್ನಾವರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಮುಂದುವರೆದಿದೆ. ಇನ್ನಷ್ಟು ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ನಾಳೆ‌ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇಂದು ಭಟ್ಕಳ ತಾಲೂಕಿನಾದ್ಯಂತ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಒಟ್ಟು 95 ಮಿಲಿಮೀಟರ್ ಮಳೆ ಆಗಿದೆ. ತಾಲೂಕಿನ ಹೆಬಳೆ ಗ್ರಾಮ ವ್ಯಾಪ್ತಿಯ ಜಟಗೇಶ್ವರ ದೇವಾಲಯ ಸಮೀಪದ ಪ್ರದೇಶ ಸಂಪೂರ್ಣ ಜಲವೃತವಾಗಿದೆ.ಮುರ್ಡೇಶ್ವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರದೇಶ ನೀರಿನಿಂದ ಸುತ್ತುವರಿದಿದೆ. ಮಳೆ ನೀರಿನಿಂದಾಗಿ ಭಟ್ಕಳದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ

ಮಳೆಯ ಅಬ್ಬರಕ್ಕೆ ಕುಮಟಾ, ಭಟ್ಕಳ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಕುಮಟಾ ವಾಲ್ಕಳ್ಳಿ ಗ್ರಾಮ ಕುಜಳ್ಳಿ ಹೋಬಳಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಮಳೆಯಿಂದ ಕುಮಟಾ – ಸಿದ್ದಾಪುರ ರಸ್ತೆ ಜಲಾವೃತದಿಂದಾಗಿ ಸಂಚಾರ ತಾತ್ಕಾಲಿಕ ಬಂದ್ ಆಗಿದೆ. ಕುಮಟಾ ಹಾಗೂ ಭಟ್ಕಳದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ರೀತಿಯಾಗಿ ಮಳೆ ಮುಂದುವರೆದರೆ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ಸುರಕ್ಷತಾ ಕ್ರಮವಾಗಿ ಎಲೆಕ್ಟ್ರಿಕ್ ಉಪಕರಣಗಳನ್ನ ಬಂದ್ ಮಾಡುವಂತೆ ಹವಾಮಾನ ಇಲಾಖೆ ಮನವಿ ಮಾಡಿದ್ದು, ಮಳೆ ಬರುವಾಗ ಶಿಥಿಲ ಕಟ್ಟಡ, ಮರದ ಕೆಳಗಡೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.