suddibindu.in
ಕುಮಟಾ : ಲೋಕಸಭಾ ಚುನಾವಣಾ ರಣಾಂಗಣ ಅಂತಿಮ ಘಟ್ಟ ತಲುಪಿದ್ದು, ಮತದಾರರು ತಮ್ಮ ಅಂತಿಮ ನಿರ್ಧಾರ ದಾಖಲಿಸಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದ್ದು, ಖುದ್ದು ರಾಜ್ಯದ ಮುಖ್ಯಮಂತ್ರಿಯೇ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಬರಲಿದ್ದು, ಈ ಸಂದರ್ಭ ತನ್ನ ಹಳೆ ಚಾಳಿ ಮುಂದುವರೆಸಿದ ಕಾಂಗ್ರೆಸ್ ಮುಖಂಡ ಈ ಬಾರಿಯೂ ಕ್ಷೇತ್ರದಿಂದ ಪರಾರಿಯಾಗಿ (ಮೊಬೈಲ್ ಸ್ವಿಚ್ ಆಫ್) ಯುದ್ದ ಸಂದರ್ಭದಲ್ಲಿ “ಶಸ್ತ್ರ ತ್ಯಾಗ” ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಕಳೆದ 2023ರಲ್ಲಿ ನಡೆದ ವಿಧಾಸಭಾ ಚುನಾವಣಾ ಸಂರ್ಭದಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಿದ ಈ ಮುಖಂಡ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಕ್ಷೇತ್ರದಿಂದ ಪಲಾಯನವಾಗಿ ಈಗಿನಂತೆ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದ, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈತನ ಪಲಾಯನದ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ವಾಪಸ್ ಬಂದಿದ್ದ. ಆದರೆ ಕಾಂಗ್ರೆಸ್ಸಿನಂತಹ ಇತಿಹಾಸ ಇರುವ ಪಾರ್ಟಿಯಲ್ಲೇ ಈತ ಠೇವಣಿ ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಒಂದು ಕಪ್ಪು ಚುಕ್ಕೆ ಆಗುವಂತೆ ಮಾಡಿದ್ದನ್ನು ಪಕ್ಷದ ನಾಯಕರು ಇನ್ನೂ ಮರೆತಿಲ್ಲ.

ಇದನ್ನೂ ಓದಿ

ರಾಜ್ಯದಲ್ಲಿ ಸರಕಾರ ರಚನೆ ಆದ ಬಳಿಕ ಈತ ಕ್ಷೇತ್ರದಲ್ಲಿ ವಾಪಸ್ಸಾಗುವ ಮೂಲಕ ವರ್ಗಾವಣೆ ದಂಧೆಯಿಂದ ಹಿಡಿದು ಎಲ್ಲವನ್ನೂ ಈತನೇ ನೋಡಿಕೊಂಡು ಆದಷ್ಟು ಬಾಚಿಕೊಂಡ, ಆದರೆ ಇದೀಗ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸುವ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಂಡು ಸಿದ್ಧತೆ ಮಾಡುವಂತೆ ರಾಜ್ಯ ನಾಯಕರು ಸೂಚನೆ ಕೊಟ್ಟಾಗ ಒಪ್ಪಿಕೊಂಡು ಬಂದ ಈ ಮುಖಂಡ ಮತ್ತೆ ತನ್ನ ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದಾನೆ.

ಈತನ ನಡೆಯಿಂದ ಕಂಗಾಲಾಗಿರುವ ರಾಜ್ಯ ನಾಯಕರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಹೆಗಲಿಗೆ ಹಾಕಿ ಎಲ್ಲಾ ಸಿದ್ಧತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದಾರಂತೆ‌. ಆದರೆ ಅತ್ಯಂತ ಹಿರಿಯ ಪಕ್ಷವಾಗಿರುವ ಕಾಂಗ್ರೆಸ್ ಇಂತಹ ಮಕ್ಕಾಳಾಟವಾಡುವ ಮುಖಂಡನ ಇಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ಮುಂದಾದರೆ ಪಕ್ಷಕ್ಕೆ ಬರಬೇಕಾದ ಒಂದು ಮತ ಕೂಡ ಬರುವುದು ಕಷ್ಟವಾಗಲಿದೆ. ಹೀಗಾಗಿ ಇಂತಹ ಸಮಯ ಸಾಧಕ ರಾಜಕಾರಣಿಗೆ ಪಾಠ ಕಲಿಸಬೇಕಿದೆ ಎಂದು ಕಾಂಗ್ರೆಸ್ಸಿನ ಅನೇಕ ಪ್ರಮುಖರು ಒತ್ತಾಯಿಸುತ್ತಿದ್ದಾರೆ‌.