ಕಾರವಾರ: ೧೦ ವರ್ಷಗಳ ಆಡಳಿತ ಚುನಾವಣಾ ಪ್ರಚಾರಕ್ಕೆ ಮಾತ್ರ ಆಗಮಿಸುವ ಪ್ರಧಾನಿ ಮೋದಿಗೆ ಉತ್ತರಕನ್ನಡದಲ್ಲಿ #GoBackModi ಬಿಸಿ ತಾಕಿದೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ನೆರೆ ಬಂದಾಗ, ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಹಾಗೂ ಮುಸ್ಲಿಮರ ಬಗ್ಗೆ ನಾಲಿಗೆ ಹರಿಬಿಟ್ಟಾಗ, ಅರಣ್ಯ ಅತಿಕ್ರಮಣ ಹಕ್ಕು, ಸುಸಜ್ಜಿತ ಆಸ್ಪತ್ರೆ ಬಗ್ಗೆ ಎಲ್ಲಿಯೂ ಈವರೆಗೆ ಮಾತನಾಡದ ಪ್ರಧಾನಿ ಮೋದಿ, ಇಂದು ಚುನಾವಣಾ ಪ್ರಚಾರಕ್ಕೆಂದು ಶಿರಸಿಗೆ ಆಗಮಿಸುತ್ತಿರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಉತ್ತರಕನ್ನಡದಿಂದ #GoBackModi ಹ್ಯಾಷ್‌ಟ್ಯಾಗ್ ಬೆಳಿಗ್ಗೆ 11ರಿಂದ ಟ್ವಿಟರ್‌ನಲ್ಲಿ ಸದ್ದು ಮಾಡಿದೆ. ಉತ್ತರಕನ್ನಡಕ್ಕೆ ಸೇರಿದ ಸುಮಾರು 20ಕ್ಕೂ ಅಧಿಕ ಅಂಶಗಳನ್ನಿಟ್ಟುಕೊಂಡು ಟ್ವೀಟ್ ಮಾಡಲಾಗುತ್ತಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಶಾಸಕರುಗಳ ಪರ ಪ್ರಚಾರಕ್ಕೆ ಕಾರವಾರಕ್ಕೆ ಬಂದಿದ್ದು ಬಿಟ್ಟರೆ ಮೋದಿಯವರು ಎರಡನೇ ಬಾರಿಗೆ ಪ್ರಚಾರಕ್ಕೆಂದೇ ಶಿರಸಿಗೆ ಈ ಬಾರಿ ಬಂದಿದ್ದಾರೆ. ಜನರ ಸಂಕಷ್ಟಗಳಿಗೆ ದನಿಯಾಗದ ಮೋದಿ, ಕೇವಲ ಚುನಾವಣಾ ಪ್ರಚಾರಕ್ಕೆ ಬರುವ ಪ್ರಧಾನಿಯಾದಂತಾಗಿದ್ದು, ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.