ಏನೇ ಸಮಾನತೆ ಎಂದರೂ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಅಭ್ಯರ್ಥಿ ಹುಟ್ಟಿದ `ಜಾತಿ’ಯನ್ನೂ ಪರಿಗಣಿಸಲಾಗುತ್ತದೆ ಎನ್ನುವುದು ರಾಜಕೀಯ ಅಆಇಈ ಗೊತ್ತಿರುವ ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಆದರೆ ನಾವೆಲ್ಲ ಹಿಂದೂ, ನಾವೆಲ್ಲ ಒಂದು'' ಎನ್ನುತ್ತಲೇಬ್ರಾಹ್ಮಣರಿಗೆ ಮತ ನೀಡಿ, ಬ್ರಾಹ್ಮಣರನ್ನು ಗೆಲ್ಲಿಸಿ” ಎಂಬ ಹಾಡನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಬಿಜೆಪಿಯ ಡೋಂಗಿತನ ಪ್ರದರ್ಶಿಸುತ್ತದೆ.

ಇದನ್ನೂ ಓದಿ

“ಬಿಜೆಪಿ ಅಭ್ಯರ್ಥಿ ಗೆಲ್ಲಲು ಕೇವಲ ಬ್ರಾಹ್ಮಣ ಮತವಷ್ಟೇ ಸಾಕೇ? ಅಕಸ್ಮಾತ್ ಅನಂತಕುಮಾರ ಹೆಗಡೆ ಅಭ್ಯರ್ಥಿ ಆಗಿದ್ದರೆ ಅಪ್ಪಿತಪ್ಪಿಯೂ ಇಂತಹ ಎಡವಟ್ಟು ಆಗುತ್ತಿರಲಿಲ್ಲ, ಅನಂತಕುಮಾರ ಯಾವತ್ತೂ ಇತರೇ ಜಾತಿಯವರನ್ನು ಕನಿಷ್ಟವಾಗಿ ಕಂಡವರೇ ಅಲ್ಲ, ಆದರೆ ಕಾಗೇರಿ ಹಿಂದೊಂದು, ಮುಂದೊಂದು ಮಾಡುವ ಪಕ್ಕಾ ಜಾತಿ ರಾಜಕಾರಣಿ” ಇಂತಹ ಚರ್ಚೆಗಳೆಲ್ಲ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದಿದೆ.

“ಯೋಚಿಸಿ ಮತ ಹಾಕವ್ವು, ಬ್ರಾಹ್ಮಣರೆಲ್ಲ ಬಿಜೆಪಿ ಆರಿಸ್ ತರಾವ್ವು, ಭಾರೀ ಬಹುಮತದಿಂದ ಕಾಗೇರಿನ ಆರಿಸ್ ತರಾವ್ವು, ಮಾರ್ ಮಾರಿಗೊಂದು ಶಾಲೆ, ಶಿರಸಿ ಶೈಕ್ಷಣಿಕ ಜಿಲ್ಲೆ ಆತು, ತೋಟಗಾರಿಕೆ ಕಾಲೇಜ್ ಆತು… ಬ್ರಾಹ್ಮಣರೆಲ್ಲ ಬಿಜೆಪಿ ಆರಿಸ್ ತರಾವ್ವು, ಬಿಜೆಪಿಗ್ ಮತ ಹಾಕವ್ವು…” ಹೀಗೆ ಸಾಗುತ್ತದೆ ಹವ್ಯಕರ ಭಾಷಾ ಶೈಲಿಯಲ್ಲಿರುವ ಹಾಡು.

ಅವರೆನೋ ಈ ಹಾಡಿನಿಂದಾಗಿ ತಮ್ಮವರ ಒಗ್ಗಟ್ಟು ಸಾಧಿಸಬಹುದೆಂಬ ಯೋಚನೆಯಲ್ಲಿದ್ದರು. ಆದರೆ ಇದರಿಂದಾಗಿ ಬಿಜೆಪಿಯ ಕಾರ್ಯಕರ್ತರಲ್ಲಿ ಬಿಕ್ಕಟ್ಟು ಮೂಡುವ ಎಲ್ಲ ಸಾಧ್ಯತೆಯೂ ದಟ್ಟವಾಗಿದೆ.

“ಕಳೆದ ಮೂರು ದಶಕದಿಂದ ಬಿಜೆಪಿಯ ಸಿಂಹಾಸನದಲ್ಲಿ ಬ್ರಾಹ್ಮಣರೇ ಆಸೀನರಾಗುತ್ತಿದ್ದಾರೆ. ಹಿಂದುಳಿದ ವರ್ಗದವರಾದ ನಾವು ಬರೀ ಪೋಸ್ಟರ್ ಹಚ್ಚಲು, ಬ್ಯಾನರ್ ಕಟ್ಟಲು, ಪೊಲೀಸ್ ಕೇಸು ಹಾಕಿಸಿಕೊಳ್ಳಲು ಮಾತ್ರ ಬಿಜೆಪಿಗೆ ನಾವು ಬೇಕು. ನಾವು ಧರ್ಮ, ಗೋಮಾತೆ, ಮುಸ್ಲಿಂ ದ್ವೇಷ ಎನ್ನುತ್ತ ಸಾಲು ಸಾಲು ಕೇಸು ಹಾಕಿಸಿಕೊಂಡು ಕೋರ್ಟು ಕಚೇರಿ ಅಲೆಯುತ್ತಿದ್ದರೆ ಈ ಪುಣ್ಯಾತ್ಮ ಕಾಗೇರಿ ಎಂಬ ಜನಪ್ರತಿನಿಧಿ ಮಾತ್ರ ಮುಸ್ಲಿಮರ ಟೋಪಿ ಧರಿಸಿ, ಅವರ ಇಫ್ತಾರ್ ಕೂಟದಲ್ಲಿ ಭೂರೀ ಭೋಜನ ಮಾಡುತ್ತಾರೆ. ಇಲ್ಲಿವರೆಗೆ ಕಾಗೇರಿಯ ಮೇಲೆ ಪೊಲೀಸ್ ಕೇಸೇ ಇಲ್ಲ ಎನ್ನುವುದನ್ನು ಕೇಳಿ ನನ್ನಂತಹ ಸಾವಿರಾರು ಕಾರ್ಯಕರ್ತರಿಗೆ ಆಶ್ಚರ್ಯವಾಗಿದೆ. ಧರ್ಮ, ಮಾತೆ ಎನ್ನುತ್ತ ನಮಗೆ ಉಂಡೆ ನಾಮ ತಿಕ್ಕುವ ಈ ಬಿಜೆಪಿಯವರ ಡೋಂಗಿತನ ಇನ್ನೂ ನಂಬಿದರೆ ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ” ಎಂದು ಭಟ್ಕಳ ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಈ ಹಿಂದೆ ಪರೇಶ್ ಮೇಸ್ತನ ಪ್ರಕರಣದಲ್ಲಿ ಬಿಜೆಪಿಯವರ ಮಾತು ಕೇಳಿ ತಿಂಗಳುಗಳ ಕಾಲ ಊರೇ ಬಿಡಬೇಕಾಯಿತು. ಖುದ್ದು ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಅವರೇ ಹೊನ್ನಾವರಕ್ಕೆ ಬಂದು ಹೋದರು. ಅಂದಿನ ಸಂಸದ ಅನಂತಕುಮಾರ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಚೆಲ್ಲಿದ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದರು. ಆದರೆ ಆಗಿದ್ದೇನು? ನಮ್ಮ ವ್ಯಾಪಾರ, ವ್ಯವಹಾರ ಎಲ್ಲಾ ಹಾಳಾಯಿತೇ ಹೊರತು ಮತ್ತೇನೂ ಆಗಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರವೂ ಪಡೆಯಿತು. ಆದರೆ ಈ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ತಂಡ ಪರೇಶ ಮೇಸ್ತನ ಪ್ರಕರಣಕ್ಕೆಬಿ” ರಿಪೋರ್ಟ್ ಹಾಕಿದ ಕಾರಣ ಪ್ರಕರಣ ಠುಸ್ ಆಯಿತು. ಈ ಸಂಘ ಪರಿವಾರ ಮತ್ತು ಅದರ ರಾಜಕೀಯ ಅಂಗವಾಗಿರುವ ಬಿಜೆಪಿಯನ್ನು ನಂಬಿದರೆ “ದೇವರೇ ಗತಿ” ಎಂದು ಕುಮಟಾದ ಸಾಮಾಜಿಕ ಕಾರ್ಯಕರ್ತ ಸಂತೋಷ್ ನಾಯ್ಕ ಹೇಳಿದ್ದಾರೆ.