suddibindu.in
ಕುಮಟಾ:30 ವರ್ಷ ಸುಳ್ಳು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದು ಬಿಟ್ಟರೆ ಬೇರೆ ಏನನ್ನೂ ಬಿಜೆಪಿಯವರು ಮಾಡಿಲ್ಲ. ೩೦ ವರ್ಷದಿಂದ ಜನರಿಗಾಗಿ ಏನು ಮಾಡಿದ್ದಾರೆಂದು ಅವರು ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸವಾಲೆಸೆದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತೊರ್ಕೆ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗೋಕರ್ಣ ಮತ್ತು ಮಿರ್ಜಾನ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದೇಶಕ್ಕೆ ವಿದ್ಯುತ್ ನೀಡುವ ನಮ್ಮ ಜಿಲ್ಲೆಯ ಜನಕ್ಕೇ ಸರಿಯಾಗಿ ಕರೆಂಟ್ ಕೊಟ್ಟಿರಲಿಲ್ಲ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕೇವಲ ಶಾಸಕರಲ್ಲ, ಮಂತ್ರಿಯೂ ಆಗಿದ್ದರು. ಸ್ಪೀಕರ್ ಆಗಿದ್ರೂ ನಮ್ಮ ಜಿಲ್ಲೆಗೆ ನ್ಯಾಯ ಕೊಡೋದಿಕ್ಕಾಗಿಲ್ಲ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಮತ್ತೆ ಸುಳ್ಳು ಹೇಳುತ್ತಿರುವ ಇವರನ್ನ ನಂಬಬೇಡಿ. ನುಡಿದಂತೆ ನಡೆದ ಸರ್ಕಾರ ನಮ್ಮದು. ಬಿಜೆಪಿಯವರಿಗೆ ಬಡವರಿಗೂ ಕೊಡಲಾಗುವುದಿಲ್ಲ, ಅಭಿವೃದ್ಧಿಯೂ ಮಾಡಲಾಗುವುದಿಲ್ಲ, ಅಧಿಕಾರಕ್ಕೆ ಬಂದರೆ ೪೦% ಕಮಿಷನ್ ತಿನ್ನೋದಿಕ್ಕೆ ಇವರಿಗೇ ಸಾಕಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಜಾತಿ- ಧರ್ಮ, ಹಿಂದುತ್ವ, ಸುಳ್ಳು ಆಶ್ವಾಸನೆಗಳನ್ನ ನೀಡಿ ಜನರ ದಾರಿ ತಪ್ಪಿಸಿದ್ದು ಬಿಟ್ಟರೆ ದಶಕಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಂದೇ ಒಂದು ಜನೋಪಯೋಗಿ ಕೆಲಸ ಮಾಡಿಲ್ಲ. ಕಾರ್ಯಕರ್ತರಿಂದಲೇ ನಾವೆಲ್ಲ ನಾಯಕರುಗಳಾಗಿ ವೇದಿಕೆಯ ಮೇಲೆ ಕುಳಿತಿದ್ದೇವೆ. ರಾಜಕೀಯ ಜೀವನದಲ್ಲಿ ಜನರ ಪ್ರೀತಿ- ವಿಶ್ವಾಸಕ್ಕಾಗಿ ದುಡಿಯುತ್ತಿದ್ದೇನೆ ಹೊರತು ಚುನಾವಣೆಯ ಸೋಲು- ಗೆಲುವಿಗೆ ತಲೆಕೆಡಿಸಿಕೊಳ್ಳಲ್ಲ. ಹಾಗಂತ ಇದು ಬಿಜೆಪಿ- ಕಾಂಗ್ರೆಸ್ ಸೋಲು- ಗೆಲುವಿನ ಚುನಾವಣೆಯೂ ಅಲ್ಲ. ಬಡವರು, ರೈತರು, ಮಹಿಳೆಯರ ಮೇಲಿನ ದೌರ್ಜನ್ಯ ತಡೆದು ಅವರನ್ನ ಸಬಲೀಕರಣಗೊಳಿಸಲು ಕಾಂಗ್ರೆಸ್ ಬರಬೇಕಿದೆ. ನಮಗೆ ಸ್ಥಳೀಯವಾಗಿ ಯಾರು ಸ್ಪಂದಿಸುತ್ತಾರೆ, ನಮ್ಮ ನೋವನ್ನ ಯಾರು ಅರಿತುಕೊಳ್ಳುತ್ತಾರೋ ಅಂಥವರಿಗೆ ಮತ ನೀಡಿ ಗೆಲ್ಲಿಸಬೇಕಿದೆ; ಕಾಂಗ್ರೆಸ್‌ನ್ನು ಇಲ್ಲಿ ಗೆಲ್ಲಿಸುತ್ತೀರೆಂಬ ವಿಶ್ವಾಸವಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ, ಇದು ಲೋಕಸಭಾ ಚುನಾವಣೆ; ವಿಶಾಲ ಜಿಲ್ಲೆಯಲ್ಲಿ ಅಭ್ಯರ್ಥಿಯೇ ಮತದಾರರ ಬಳಿ ತೆರಳಲು ಕಷ್ಟವಾಗುತ್ತದೆ. ಹೀಗಾಗಿ ಅವರಿಗಾಗಿ ನಾವು ಒಟ್ಟಾಗಿ ದುಡಿಯಬೇಕಿದೆ. ಇದು ಕೇವಲ ಕಾಂಗ್ರೆಸ್ ಅಥವಾ ಕರ್ನಾಟಕದ ಚುನಾವಣೆಯಲ್ಲ; ಭಾರತದ ಭವಿಷ್ಯದ ಚುನಾವಣೆ. ಬಿಜೆಪಿಯವರು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಆಶ್ವಾಸನೆ ಸುಳ್ಳು ಎಂದರು. ನಮ್ಮ ಸರ್ಕಾರ ಬಂದ ಬಳಿಕ ಬಿಜೆಪಿಯವರೇ ಮೊದಲು ಸಾಲಿನಲ್ಲಿ ನಿಂತು ಗ್ಯಾರಂಟಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈಗ ಮತ್ತೆ ಈ ಗ್ಯಾರಂಟಿ ಯೋಜನೆ ಮೋದಿಯವರದ್ದೆಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಮೂರು ದಶಕಗಳಲ್ಲಿ ಜಿಲ್ಲೆಯ ಸಂಸದರನ್ನೇ ಜನ ನೋಡಿಲ್ಲ. ಜನರ ಕಷ್ಟ- ಸುಖಕ್ಕೆ ಬಂದು ನಿಲ್ಲುವ ವೈದ್ಯೆ ಡಾ.ಅಂಜಲಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿತರಬೇಕಿದೆ; ನಮಗೂ ನಮ್ಮ ಜನರ ಮೇಲೆ ಭರವಸೆ ಇದೆ. ನಮ್ಮ ಬೂತ್ ನಲ್ಲಿ ನಾವೇ ಅಭ್ಯರ್ಥಿ ಎಂದು ಚುನಾವಣೆ ಮಾಡಬೇಕಿದೆ, ಅದನ್ನ ಬಿಟ್ಟು ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿ ಮಾತನಾಡಿ, ಬಿಜೆಪಿಗೆ, ಅವರ ಅಭ್ಯರ್ಥಿಗೆ ಮತ ಬರಲ್ಲ; ಅದಕ್ಕಾಗಿ ಪ್ರಧಾನಿ ಮೋದಿ ಹೆಸರಲ್ಲಿ ಅವರು ಮತ ಕೇಳುತ್ತಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಗೆ, ಗ್ಯಾರಂಟಿ ನೀಡಿದ ಕಾಂಗ್ರೆಸ್‌ಗೆ ಈ ಬಾರಿ ನಾವೆಲ್ಲ ಮತ ನೀಡಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮತ ಚಲಾಯಿಸಬೇಕಿದೆ. ಇಲ್ಲಿನ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಉಸ್ತುವಾರಿ ಸಚಿವರುಗಳ ಕೈ ಬಲಪಡಿಸಲು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದು ಕರೆನೀಡಿದರು.

ಪ್ರಚಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯ್ಕ ಮಾತನಾಡಿ, ಕಾರ್ಯಕರ್ತರಲ್ಲಿ ಪಕ್ಷನಿಷ್ಠೆ ಇರಬೇಕು. ಪಕ್ಷದಿಂದ ಬೆಳೆದಿದ್ದೇವೆ, ಪಕ್ಷದ ಋಣವಿದೆ ಎಂಬುದನ್ನು ಮರೆಯಬಾರದು ಎಂದು ಕರೆನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ವೇದಿಕೆ ಮುಂಭಾಗ ಸೇರಿರುವ ಇಷ್ಟೊಂದು ಸಂಖ್ಯೆಯ ಮಹಿಳೆಯರನ್ನ ನೋಡಿದರೆ ಈ ಬಾರಿ ನಮ್ಮ ಮಹಿಳಾ ಅಭ್ಯರ್ಥಿಯ ಗೆಲುವು ಶತಃಸಿದ್ಧ ಎಂದೆನಿಸುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಈಗಾಗಲೇ ನಾವು ಪ್ರಚಾರಾರ್ಥವಾಗಿ ಹೋಗಿಬಂದಿದ್ದೇವೆ. ಇದೀಗ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದೇವೆ. ಚುನಾವಣೆಯವರೆಗೆ ಯಾರೂ ವಿರಮಿಸದೆ ಕಾರ್ಯನಿರ್ಹಿಸಿ ಡಾ.ಅಂಜಲಿಯವರ ಗೆಲುವಿಗೆ ಶ್ರಮಿಸಬೇಕು ಎಂದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಅಧ್ಯಕ್ಷ ಭುವನ್ ಭಾಗ್ವತ್ ಅವರಿಗೆ ಮಿರ್ಜಾನ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್‌ ನಾಯಕರುಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ತಾಲೂಕು ಗ್ಯಾರಂಟಿ ಸಮಿತಿಯ ಅಶೋಕ ಗೌಡ, ಭಾಸ್ಕರ ಪಟಗಾರ, ಎಂ.ಎಲ್.ನಾಯ್ಕ, ಆರ್.ಎಚ್.ನಾಯ್ಕ, ಶಂಭು ಶೆಟ್ಟಿ ಮುಂತಾದವರಿದ್ದರು.

ಇವ್ರ ಜಾಯಮಾನದಲ್ಲಿ ಒಂದೇ ಒಂದು ಕೆಲ್ಸ ಮಾಡಿದ್ರೆ ಹೇಳಿ.
‘ಬಿಜೆಪಿ ಸರ್ಕಾರ, ಮಾಜಿ ಶಾಸಕ ಸುನೀಲ್ ನಾಯ್ಕ ತಂದ ಯೋಜನೆಗಳನ್ನ ಮಂಕಾಳ ವೈದ್ಯರು ಉದ್ಘಾಟನೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇತ್ತೀಚಿಗೆ ಭಟ್ಕಳದಲ್ಲಿ ಆರೋಪಿಸಿದ್ದಾರೆ. ಇವರ ಜಾಯಮಾನದಲ್ಲಿ ಒಂದೇ ಒಂದು ಕಾಮಗಾರಿ ಮಾಡಿಸಿದ್ದರೆ ಹೇಳಿ. ಸ್ಪೀಕರ್ ಎಂಬ ಗೌರವಯುತ ಸ್ಥಾನದಲ್ಲಿ ಕುಳಿತವರು ಮತ್ತೆ ಈಗ ಸುಳ್ಳು ಹೇಳುತ್ತಿದ್ದಾರೆ. ಹಾಸ್ಪಿಟಲ್ ಬಗ್ಗೆ ಒಂದೇ ಒಂದು ಸೊಲ್ಲೆತ್ತದವರು ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಮಂಕಾಳ ವೈದ್ಯ ಕಿಡಿಕಾರಿದರು.

ನಮ್ಮ ಅವಧಿಯಲ್ಲಿ ಕಾರವಾರದಲ್ಲಿ ಮೆಡಿಕಲ್ ಕಾಲೇಜು ಮಾಡಿದ್ದೇವೆ. ೪೫೦ ಹಾಸಿಗೆಯ ಹೊಸ ಆಸ್ಪತ್ರೆಯನ್ನೂ ಮಾಡಿಸುತ್ತಿದ್ದೇವೆ. ತುರ್ತಾಗಿ ಅಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಸೌಕರ್ಯ ಒದಗಿಸುತ್ತಿದ್ದೇವೆ. ಈಗಲೂ ನನ್ನ ಮಾತಿಗೆ ನಾನು ಬದ್ಧ; ಸರ್ಕಾರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮಾಡದಿದ್ದರೆ ನಾನೇ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾಗೇರಿಯವರೆ, ಅರಣ್ಯ ಅತಿಕ್ರಮಣದಾರರು ನಿಮ್ಮ ಜಿಲ್ಲೆಯ ಜನರಲ್ಲವೇ? ನಿಮ್ಮ ಮತದಾರರಲ್ಲವೇ? ಒಂದೇ ಒಂದು ಹಕ್ಕು ಪತ್ರ ಕೊಡಲಾಗದ ಇವರು ಸಂವಿಧಾನ ಬದಲಾಯಿಸುತ್ತೇವೆನ್ನುತ್ತಾರೆ. ಇಂಥ ಕೆಟ್ಟ ಬಿಜೆಪಿಯನ್ನ ಕಿತ್ತೊಗೆಯಬೇಕಿದೆ.
ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ