ಕಾರವಾರ : ಈ ಹಿಂದೆ ಭಟ್ಕಳದಲ್ಲಿ ನಡೆದ ಡಾ. ಚಿತ್ತರಂಜನ ಮತ್ತು ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕರ ಹತ್ಯೆಯ ತನಿಖೆ ಬಗ್ಗೆ ಮಾತೇ ಆಡದ ಇಂದಿನ ಸಂಸದ ಹಾಗೂ ಬಿಜೆಪಿ ನಾಯಕರು, ಬರೀ ಕೋಮು ಗಲಭೆಗೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಎಚ್. ನಾಯ್ಕ ಗಂಭೀರವಾಗಿ ಆರೋಪಿಸಿದ್ದಾರೆ.

ಅವರು ಇಂದು ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಭಟ್ಕಳದ ತೆಂಗಿನಗುಂಡಿಯಲ್ಲಿ ನಡೆದ ಧ್ವಜ ಕಟ್ಟೆ ವಿವಾದದಲ್ಲಿ ಸಚಿವ ಮಂಕಾಳು ವೈದ್ಯರ ಕೈವಾಡವಿದೆ ಎಂದು ಬಿಜೆಪಿಗರು ಬಿಂಬಿಸುತ್ತಿದ್ದಾರೆ. ಚುನಾವಣೆ ಹತ್ತಿರವಿರುವಾಗ ಗೊಂದಲದ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ‌ . ಇಷ್ಟೆಲ್ಲಾ ಮಾತನಾಡುವವರು ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ನಾಯ್ಕ ಕೊಲೆ ಬಗ್ಗೆ ಯಾಕೆ ಮೌನವಾಗಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ.

ಇದನ್ನೂ ಓದಿ:-ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ : ಅಭಿಮಾನಿಗಳಿಗೆ ತೀವ್ರ ಆಘಾತ

ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ನಾಯ್ಕ ಕೊಲೆಯಾಗಿ ಇಪ್ಪತ್ತೈದು ವರ್ಷ ಕಳೆಯುತ್ತಾ ಬಂದಿದೆ. ಆದರೆ ಆ ಪ್ರಕರಣದ ತನಿಖೆ ಆಗುವ ಬಗ್ಗೆ ಯಾಕೆ ಬಿಜೆಪಿಗರು ಧ್ವನಿ ಎತ್ತುತ್ತಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಇವರ ಸರ್ಕಾರ ಇದ್ದಾಗ ತನಿಖೆ ಮಾಡಿಸಬಹುದಾಗಿತ್ತು. ಆ ಘಟನೆ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ. ಅವರ ಸಾವಿಗೆ ನ್ಯಾಯ ಸಿಗೋದು ಬೇಕಾಗಿಲ್ವಾ?

ತೆಂಗಿನಗುಂಡಿಯಲ್ಲಿ ನಿರ್ಮಿಸಲಾಗಿದ್ದ ಧ್ವಜದ ಕಟ್ಟೆಯನ್ನು ಸಚಿವ ಮಂಕಾಳ ವೈದ್ಯರ ಕುಮ್ಮಕ್ಕಿನಿಂದಲೇ ತೆರವು ಮಾಡಲಾಗಿದೆ ಎಂದು ಬಿಜೆಪಿ ಪ್ರಮುಖರು ಆರೋಪಿಸುತ್ತಿದ್ದಾರೆ. ಹಿಂದುಳಿದ ವರ್ಗದ ಸಚಿವರಾಗಿರುವ ಮಂಕಾಳ ವೈದ್ಯರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ. ಕೋಮು ಗಲಭೆ ಸೃಷ್ಟಿ ಮಾಡುವುದು ಬಿಟ್ಟು ಬಿಜೆಪಿಗೆ ಬೇರೆ ಕೆಲಸ ಇಲ್ಲ ಎಂದಿದ್ದಾರೆ.

ಪ್ರಮುಖರಾದ ನಾರಾಯಣ ಕುಮಟಾಕರ, ಜಗದೀಶ ನಾಯ್ಕ ವಿಠೋಬ ಅಂಗಡಿಕೇರಿ, ಶ್ರೀಕಾಂತ ಮೊದಲಾದವರು ಈ ಸಂದರ್ಭ ಹಾಜರಿದ್ದರು.