ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಅವಲೋಕನ ಮಾಡಿದರೆ ಕಳೆದ ಮೂರು ದಶಕದಿಂದ ಬಿಜೆಪಿ ಟಿಕೆಟ್ ಅನಂತಕುಮಾರ ಹೆಗಡೆ ಅವರಿಗೆ ಮೀಸಲಾಗಿತ್ತು. ಆದರೆ ಅದೇ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಟಿಕೆಟಿಗಾಗಿ ಅಲೆದಾಡುವ ದುಸ್ಥಿತಿ ಎದುರಾಗಿರುವಂತೆ ಕಾಣುತ್ತಿದೆ.

ಹೌದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸತ್ ಸದಸ್ಯರಾಗಿ ಅನಂತಕುಮಾರ ಹೆಗಡೆ ಆಯ್ಕೆ ಆಗಿದ್ದಾರೆ. ಇದುವರೆಗಿನ ಅವರ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿ ಟಿಕೆಟ್ ಸಮಸ್ಯೆ ಎದುರಾಗಿರಲಿಲ್ಲ. ಲೋಕಸಭಾ ಚುನಾವಣೆ ಬಂತು ಅಂದರೆ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಎನ್ನುವ ಪರಿಸ್ಥಿತಿ ಇತ್ತು. ಅಷ್ಟೆ ಅಲ್ಲದೆ ಬೇರೆ ಟಿಕೆಟ್ ಆಕಾಂಕ್ಷಿಗಳೇ ಇರತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಅವರೇ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗೆ ಬಹಿರಂಗವಾಗಿ ಹೇಳಿಕೆ ಕೊಟ್ಟರೂ ಪಕ್ಷ ಟಿಕೆಟ್ ನೀಡುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗುತ್ತಿದೆ.

ಆರು ಬಾರಿ ಸಂಸದರಾಗಿ ಕೇಂದ್ರದ ಸಚಿವರಾಗಿ ಸಹ ಕಾರ್ಯ ನಿರ್ವಹಿಸಿರುವ ಅನಂತಕುಮಾರ ಹೆಗಡೆ ಅವರ ಬೆಂಬಲಕ್ಕೆ ಈಗ ಅವರದೇ ಪಕ್ಷದ ನಾಯಕರು ನಿಂತುಕೊಂಡತೆ ಕಾಣುತ್ತಿಲ್ಲ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿಯೇ ಅನಂತಕುಮಾರ ದೂರ ಉಳಿದುಕೊಂಡಿದ್ದರು. ಆದರೆ ಅದಕ್ಕೆಲ್ಲಾ ಈಗ ಬೇರೆ ಬೇರೆ ಕಾರಣ ನೀಡುತ್ತಿದ್ದಾರೆ.ಅದು ಬೇರೆ ವಿಚಾರ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜಿಲ್ಲೆಗೆ ಬಂದಾಗಲೂ ಕಾಣಿಸಿಕೊಳ್ಳದೆ ದೂರವೇ ಉಳಿದುಕೊಂಡ ಅನಂತಕುಮಾರ ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ.

ಅಂದು ಬೇಡವಾದವರು ಇಂದು ಬೇಕಾದರೇ?

ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಬಿ. ಎಸ್. ಯಡಿಯೂರಪ್ಪರಿಂದಲೂ ಇಷ್ಟು ದಿನಗಳ ಕಾಲ ಅನಂತಕುಮಾರ ಹೆಗಡೆ ಅಂತರ ಕಾಯ್ದುಕೊಂಡಿದ್ದರು. ಅದೆಷ್ಟೋ ಬಾರಿ ಯಡಿಯೂರಪ್ಪ ಅವರು ಉತ್ತರ ಕನ್ನಡಕ್ಕೆ ಬಂದರೂ ಸಹ ಒಮ್ಮೆ ಕೂಡ ಅನಂತಕುಮಾರ ಹೆಗಡೆ ಸೌಜನ್ಯಕ್ಕೂ ಅವರನ್ನು ಭೇಟಿ ಮಾಡಿ ಹೂಗುಚ್ಚ ನೀಡಿ ಪೋಟೋ ತೆಗೆಸಿಕೊಂಡು ಪ್ರಚಾರ ಪಡೆದುಕೊಂಡಿಲ್ಲ. ಆದರೆ ಈಗ ಎರಡು ದಿನದ ಹಿಂದೆ ಇವರೇ ಅವರ ಬಳಿಗೆ ಹೂಗುಚ್ಚ ತೆಗೆದುಕೊಂಡು ಹೋಗಿ ಯಡಿಯೂರಪ್ಪನವರಿಗೆ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸನ್ಮಾನಿಸಿದ್ದಾರೆ.

ಇವೆಲ್ಲವನ್ನೂ ನೋಡಿದ ಅವರದೇ ಪಕ್ಷದ ಹಲವು ಪ್ರಮುಖರು ಎಂದೂ ಟಿಕೆಟಿಗಾಗಿ ಬೇರೆಯವರ ಮನೆ ಬಾಗಿಲಿಗೆ ಹೋಗದ ನಮ್ಮ ಸಂಸದರು ಈ ಬಾರಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ನಾಯಕರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದಾರೆ‌. ಆರು ಬಾರಿ ಗೆದ್ದ ಸಂಸದ ಈ ಬಾರಿ ಟಿಕೆಟಿ ಗಾಗಿ ಅಲೆದಾಡುವಂತಾಗಿದೆ.‌ ಇದೆಂಥಾ ಪರಿಸ್ಥಿತಿ ಬಂತಪ್ಪಾ ಎಂದು ಆಡಿಕೊಳ್ಳುತ್ತಿದ್ದಾರೆ.