ಸುದ್ದಿಬಿಂದು ಬ್ಯೂರೋ
ಕಾರವಾರ : ಲೋಕಸಭಾ ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿ ಇದ್ದು,ಉತ್ತರಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಉಂಟಾಗುತ್ತಿದೆ.ಅತ್ತ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನ ರಾಜಕೀಯವಾಗಿ ದೂರವಿಡಬೇಕೆಂದು ಅವರ ವಿರೋಧಿ ಬಣ ರಣತಂತ್ರ ರೂಪಿಸಿದೆ.

ಇದಕ್ಕೆ ಪುಷ್ಠಿ ಎನ್ನುವಂತೆ ಕಾಗೇರಿ ವಿರೋಧಿ‌ ಬಣದಲ್ಲಿ ಗುರುತಿಸಿಕೊಂಡವರು ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರ ಕಟ್ಟಾ ಅಭಿಮಾನಿಗಳು ಇದೀಗ ಅನಂತಕುಮಾರ ಹೆಗಡೆ ಅವರನ್ನೆ ಈ ಭಾರೀ ಅಭ್ಯರ್ಥಿಯನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಈಗಾಗಲೇ ಅನಂತಕುಮಾರ ಮನೆಗೆ ಭೇಟಿ ನೀಡಿರುವ ಅನಂತ ಬೆಂಬಗಲಿಗರು ನೀವೆ ಈ ಭಾರಿ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕುತ್ತಿದ್ದು, ಇದಕ್ಕೆ ಅನಂತಕುಮಾರ ಕೂಡ ಮನಸ್ಸು ಮಾಡಿರುವಂತೆ ಕಂಡುಬರುತ್ತಿದೆ.

ಇಷ್ಟು ದಿನಗಳ ಕಾಲ ಅನಂತಕುಮಾರ ಹೆಗಡೆ ತಮ್ಮ ವೈಯಕ್ತಿಕ ಕಾರಣಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರವೆ ಉಳಿದುಕೊಂಡಿದ್ದರು. ಇದುವರೆಗೆ ಅನಂತಕುಮಾರ ಹೆಗಡೆ ರಾಜಕೀಯದಿಂದ ದೂರ ಉಳಿದುಕೊಂಡಿದ್ದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಾಗಲೇ ಜಿಲ್ಲೆಯಲ್ಲಿ ಒಂದು ಸುತ್ತಿನ ಸಂಚಾರ ನಡೆಸಿ ಪ್ರಚಾರವನ್ನ ಕೂಡ ಆರಂಭಿಸಿದ್ದರು.ಇನ್ನೂ ಅದೇ ರೀತಿ ಹಿಂದೂಳಿದ ವರ್ಗಗಕ್ಕೆ ಸೇರಿದವರಿಗೆ ಈ ಭಾರಿ ಬಿಜೆಪಿಯಿಂದ ಟಿಕೇಟ್ ನೀಡಲಾಗುತ್ತದೆ ಎನ್ನುವ ಸುದ್ದಿ ಸಹ ಹರಿದಾಡುತ್ತಿರುವುದರಿಂದ ಹಿಂದೂಳಿದ ವರ್ಗಕ್ಕೆ ಸೇರಿದ ಒಂದಿಷ್ಟು ಆಕಾಂಕ್ಷಿಗಳು ಸಹ ಸ್ಪರ್ಧೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ ಹಿಂದೂಳಿದ ವರ್ಗದ ಕೆಲವು ನಾಯಕರು ಹಾಗೂ ಕಾಗೇರಿಯವರನ್ನ ಯಾರೇಲ್ಲಾ ವಿರೋಧ ಮಾಡಿಕೊಂಡು ಬರುತ್ತಿದ್ದರೋ ಅವರೆಲ್ಲಾ ಸೇರಿ ಸಂಸದ ಅನಂತಕುಮಾರ ಹೆಗಡೆ ಅವರನ್ನ ಭೇಟಿಯಾಗಿ ತಾವೇ ಸ್ಪರ್ಧೆ ಮಾಡಬೇಕು ಎನ್ನುವ ಬಗ್ಗೆ ಒತ್ತಡ ಹಾಕಿದ್ದಾರೆ. ಜಿಲ್ಲೆಯಲ್ಲಿ ಇದುವರೆಗಿನ ರಾಜಕೀಯ ಪರಿಸ್ಥಿತಿ ನೋಡಿದಿದ್ದರೆ,ಇಲ್ಲಿ ಹಿಂದೂತ್ವದ ಅಲೆ ಹಾಗೂ ಮೋದಿ ಅವರ ಅಭಿಮಾನಿಗಳು ಸಹ ಇರುವುದು ಹೆಚ್ಚಿನ ಲಾಭ ಬಿಜೆಪಿಗೆ ಆಗುವ ಸಾಧ್ಯತೆ ಸಹ ಇದೆ.

ಒಂದು ವೇಳೆ ವಿಶ್ವೇಶ್ವರ ಹೆಗಡೆ ಅವರಿಗೆ ಟಿಕೇಟ್ ನೀಡಿದ್ದೆ ಹೌದಾದರೆ ಪಕ್ಷದಲ್ಲಿ ದೊಡ್ಡಮಟ್ಟದ ಭಿನ್ನಮತ ಕೂಡ ಸ್ಪೋಟಗೊಳ್ಳುವ ಸಾಧ್ಯತೆ ಇದೆ.ಹೀಗಾಗಿ ಅನಂತಕುಮಾರ ಹೆಗಡೆ ಅವರನ್ನೆ ಪುನಃ ಕಣಕ್ಕಿಳಸಬೇಕು ಎನ್ನುವುದು ಅವರ ಅಭಿಮಾನಿಗಳ ಹಾಗೂ ಬಿಜೆಪಿಯ ಹೆಚ್ಚಿ‌‌ನ ಸಂಖ್ಯೆಯ ಕಾರ್ಯಕರ್ತರ ಅಭಿಪ್ರಾಯ ಸಹ ಆಗಿದೆ. ಸಂಸದ ಅನಂತಕುಮಾರ ಹೆಗಡೆ ಜಿಲ್ಲೆಯಲ್ಲಿನ ಎಲ್ಲಾ ವರ್ಗದವರ ಜೊತೆ ಈ ಹಿಂದಿನಿಂದಲ್ಲೂ ಉತ್ತಮವಾಗಿರುವ ಸ್ನೇಹವನ್ನ ಇಟ್ಟುಕೊಂಡು ಬಂದಿದ್ದಾರೆ.

ಹೀಗಾಗಿ ಅನಂತಕುಮಾರ ಹೆಗಡೆ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದರೆ ಒಂದು ಕಡೆ ಅವರನ್ನ ಗೆಲ್ಲಿಸುವ ಪ್ರಯತ್ನದ ಜೊತೆಗೆ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕಾಗೇರಿಯವರಿಗೆ ಲೋಕಸಭಾ ಟಿಕೇಟ್ ತಪ್ಪಿಸುವ ಮೂಲಕ ರಾಜಕೀಯವಾಗಿ ಕಾಗೇರಿ ಅವರನ್ನ ರಾಜಕೀಯವಾಗಿ ದೂರ ಇಡಬೇಕು ಎನ್ನುವುದು ಕೂಡ ಕಾಗೇರಿ ವಿರೋಧಿ ಬಣದ ರಾಜಕೀಯ ಲೆಕ್ಕಾಚಾರ. ಆದರೆ ಬಿಜೆಪಿ ಈ ಬಾರಿ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನ ಅಭ್ಯರ್ಥಿ ಘೋಷಣೆ ಆಗುವವರಗೆ ಕಾದು ನೋಡಬೇಕಿದೆ.