ಸುದ್ದಿಬಿಂದು ಬ್ಯೂರೋ
ಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಜೆಡಿಎಸ್ ನಿಂದ ದೂರ ಉಳಿದಿದ್ದ ಆನಂದ ಅಸ್ನೋಟಿಕರ್ ಇದೀಗ ಲೋಕಸಭಾ ಚುನಾವಣೆಗೆ ಬಿಜೆಪಿ(BJP) ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಅಸ್ನೋಟಿಕರ್ ಜೆಡಿಎಸ್(JDS) ನಲ್ಲಿಯೇ ಮುಂದುವರೆಯುವ ತೀರ್ಮಾನಕ್ಕೆ ಬಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದ ಆನಂದ್ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕರನ್ನ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಗ್ರಾಮೀಣ ಭಾಗಗಳಲ್ಲಿ ಓಡಾಟ ನಡೆಸಿ ಸತೀಶ್ ಸೈಲ್ ಪರ ಪ್ರಚಾರವನ್ನೂ ನಡೆಸಿದ್ದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಸೋಲಿಸಲು ಆನಂದ್ ಅಸ್ನೋಟಿಕರ್ ಕೆಲಸ ಮಾಡಿದ್ದರು.
ಇನ್ನು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್‌ನಿಂದ ದೂರ ಉಳಿದಿದ್ದ ಆನಂದ್ ಅಸ್ನೋಟಿಕರ್, ಬಿಜೆಪಿ ಮನೆ ಬಾಗಿಲು ತಟ್ಟಿದ್ದರಾದರೂ ಸೇರ್ಪಡೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆನಂದ್ ಬಹುತೇಕ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎನ್ನಲಾಗಿತ್ತಾದರೂ ಬಿಜೆಪಿ ಜಪ ಮಾಡುವುದನ್ನ ಮಾತ್ರ ಬಿಟ್ಟಿರಲಿಲ್ಲ. ಅಲ್ಲದೇ ಈ ಬಾರಿ ಲೋಕಸಭಾ ಚುನಾವಣೆಗೆ ಸಂಸದ ಅನಂತಕುಮಾರ ಹೆಗಡೆ ಸ್ಪರ್ಧಿಸುವುದು ಅನುಮಾನ ಎನ್ನುವ ಮಾತು ಕೇಳಿಬಂದ ಹಿನ್ನಲೆ, ಆನಂದ್ ಅಸ್ನೋಟಿಕರ್ ಬಿಜೆಪಿ ಸೇರ್ಪಡೆಯಾಗುವ ತವಕದಲ್ಲಿದ್ದರು.
ಇದೀಗ ಲೋಕಸಭಾ ಚುನಾವಣೆಗಾಗಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಹಿನ್ನಲೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್‌ನಿಂದ ಸ್ಪರ್ಧಿಸುವ ಲೆಕ್ಕಾಚಾರದೊಂದಿಗೆ ಆನಂದ್ ಮತ್ತೆ ಜೆಡಿಎಸ್ ಶಾಲು ಧರಿಸಿ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯೊಂದಿಗೆ ಕಾಣಿಸಿಕೊಂಡಿದ್ದಾಗಿ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಇನ್ನೊಂದೆಡೆ ಬಿಜೆಪಿಯಲ್ಲಿ ಈ ಬಾರಿಯೂ ಸಂಸದ ಅನಂತಕುಮಾರ ಹೆಗಡೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.