ಸುದ್ದಿಬಿಂದು ಬ್ಯೂರೋ
ಕುಮಟಾ : ಮಳೆಗಾಲ ಮುಗಿಯುವ ಹೊತ್ತಿಗೆ ತೆನೆಯೊಡೆದು ಬರುವ ಹೊಸ ಫಲವನ್ನು ಮನೆಗೆ ತರುವ ಕ್ಷಣವನ್ನು ಹೊಸ್ತಿನ ಹಬ್ಬವಾಗಿ ಕರಾವಳಿ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಒಂದೊಮ್ಮೆ ಈ ಹಬ್ಬ ಆಚರಣೆ ಆಗದೇ ಇದ್ದಲ್ಲಿ ಗ್ರಾಮದಲ್ಲಿ ಮತ್ಯಾವ ಹಬ್ಬವೂ ನಡೆಯುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಇಂದು ಊರಿನ ಜನರು ಒಂದಾಗಿ ಗದ್ದೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆಗಳನ್ನು ಮನೆ ತುಂಬಿಸಿ ಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳು ಇಂದಿನ ಯುವ ಪೀಳಿಗೆಗಳು ಗ್ರಾಮೀಣ ಸೋಗಡಿನ ಹಬ್ಬದಿಂದ ದೂರ ಉಳಿದಿದ್ದಾರೆ. ಆದರೂ ಬರ್ಗಿಯಲ್ಲಿ ಆಚರಿಸಲಾಗುವ ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಹೊಲಗಳಲ್ಲಿ ಫಸಲೊಡೆದ ಫಲವನ್ನು ಮನೆ ತುಂಬಿಸಿಕೊಳ್ಳುವ ಪೂರ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕೃಷಿ ಮೂಲವಾದ ಈ ಹಬ್ಬವನ್ನು ನೂರಾರು ವರ್ಷಗಳಿಂದ ಈ ಭಾಗದ ರೈತರು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ಗ್ರಾಮದ ಊರ ದೇವಿಯ ಪೂಜಾ ಪುನಸ್ಕಾರ ಮಾಡಿ ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಎಲ್ಲಾ ಸಮುದಾಯದವರು ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಗದ್ದೆಯಿಂದ ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ರೈತರು ಕೃಷಿ ಉಪಕರಣಗಳಿಗೆ ಕದಿರು ಕಟ್ಟಲಾಗತ್ತೆ. ಮನೆಯಲ್ಲಿ ಧಾನ್ಯ ಲಕ್ಷ್ಮೀ ನೆಲೆಸಬೇಕು ಎನ್ನುವುದು ಇದರ ಉದ್ದೇಶ. ಇಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯ ಬಹುದಾದ ಸಂಕ್ರಾಂತಿ ಸೇರಿದಂತೆ ಯಾವ ಹಬ್ಬ ಹರಿದಿನಗಳನ್ನ ಆಚರಿಸಲಾಗಲ್ಲ ಎನ್ನುವ ಪ್ರತೀತಿಯಿದೆ.

ಬರ್ಗಿಯಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯ ಬಹುದಾದ ಸಂಕ್ರಾಂತಿ, ಗಡಿ ಹಬ್ಬ ಆಚರಿಸಲಾಗುವುದಿಲ್ಲ ಎನ್ನುವ ಪ್ರತೀತಿಯಿದೆ. ಬರ್ಗಿಯ ಎಲ್ಲಾ ಹಬ್ಬ ಹರಿದಿನಗಳಿಗೆ ಹೊಸ್ತಿನ ಹಬ್ಬವೇ ಶುಭಾರಂಭ.