ಸುದ್ದಿಬಿಂದು ಬ್ಯೂರೋ
ಕುಮಟ : ಗ್ರಾಮ ಪಂಚಾಯತ ಸದಸ್ಯೆ ಓರ್ವಳ ಜಾತಿ ಪ್ರಮಾಣ ಪತ್ರ ರದ್ದತಿ ಸಮಸ್ಯೆ‌ ಕುರಿತಾಗಿ ಪಂಚಾಯತದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ‌ ವಿಚಾರಣೆ‌ಗೆ ಬಂದಿದ್ದ ಜಿ.ಪಂ ಅಧಿಕಾರಿಗೆ ಗ್ರಾ. ಪಂ ಸದಸ್ಯರು  ಮುತ್ತಿಗೆ ಹಾಕಿದ್ದು,ಅಧಿಕಾರಿ ವಾಹನ ಬಿಟ್ಟು ಪರಾರಿಯಾದ ಘಟನೆ ಬರ್ಗಿ ಗ್ರಾಮ ಪಂಚಾಯತದಲ್ಲಿ ನಡೆದಿದೆ.

ಬರ್ಗಿ ಗ್ರಾಮ ಪಂಚಾಯತ ಒಟ್ಟು 15 ಸದಸ್ಯರ ಸಂಖ್ಯಾ ಬಲವನ್ನ ಹೊಂದಿದೆ. ಆದರೆ ಆಯ್ಕೆಗೊಂಡ ಓರ್ವ ಪಂಚಾಯತ ಸದಸ್ಯಳಿಗೆ ಜಾತಿ ಪ್ರಮಾಣ ಪತ್ರ ಪ್ರಶ್ನಿಸಿ ಅವರನ್ನ ಪಂಚಾಯತ ಕಾರ್ಯಕಲಾಪದಿಂದ ದೂರ ಇಡುವಂತೆ ಮೌಖಿತ ಆದೇಶ ಮಾಡಿದ್ದು,ಸಮಸ್ಯೆ ಬಗೆಹರಿಸುವ ಕುರಿತಾಗಿ ಸದಸ್ಯರು ಈ ಹಿಂದೆ ಪಂಚಾಯತದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು.ಪತ್ರಿಕಾಗೋಷ್ಠಿ ನಡೆಸಿರುವುದೇ ದೊಡ್ಡ ತಪ್ಪು ಎಂದು ಸ್ಥಳೀಯ ವ್ಯಕ್ತಿ ಓರ್ವರು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು, ಆ ದೂರಿನ ವಿಚಾರಣೆಗಾಗಿ ಪಂಚಾಯತಕ್ಕೆ ಬಂದಿದ್ದ ಅಧಿಕಾರಿಗೆ ಮುತ್ತಿಗೆ ಹಾಕಿ ಅಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದಸ್ಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸರಕಾರಿ ಕಾರಿನಲ್ಲಿ ಬಂದ ಅಧಿಕಾರಿ ಕಾರನ್ನ ಸ್ಥಳದಲ್ಲೆ ಬಿಟ್ಟು ಬಾಡಿಗೆ ಕಾರಿನಲ್ಲಿ ವಾಪಸ್ ಕಾರವಾರಕ್ಕೆ ತೆರಳಿದ್ದಾರೆ.

ಘಟನೆ ಹಿನ್ನಲೆ

ಬರ್ಗಿ ಗ್ರಾಮ ಪಂಚಾಯತಕ್ಕೆ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮಿಸಲಾತಿಯಡಿ ಲಕ್ಷ್ಮೀ ನಾರಾಯಣ ಗೊಂಡ ಎಂಬುವವರು ಸದಸ್ಯರಾಗಿ ಆಯ್ಕೆಗೊಂಡಿದ್ದರು. ಇದಾದ ಬಳಿಕ ಲಕ್ಷ್ನೀ ಗೊಂಡ ಅವರ ಜಾತಿ ಪ್ರಮಾಣ ಪತ್ರ ಪ್ರಶ್ನಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ( ಸಮಾಜಕಲ್ಯಾಣ ಇಲಾಖೆ) ಅದನ್ನ ರದ್ದು ಪಡಿಸಿತ್ತು.ರದ್ದು ಪಡಿಸಿರುವುದರ ಬಗ್ಗೆ ಲಕ್ಷ್ಮೀ ಗೊಂಡ ಹೈಕೋರ್ಟ್ ಮೆಟ್ಟೆಲೇರಿದ್ದು, ಕೋರ್ಟ್ ಸಹ ಲಕ್ಷ್ಮೀ ಗೊಂಡ ಅವರ ಆಯ್ಕೆ ಸರಿಯಾಗಿದೆ ಎಂದು ಹೇಳಿತ್ತು. ಲಕ್ಷ್ಮೀ ಗೊಂಡ ಅವರಿಗೆ ಗ್ರಾಮ ಪಂಚಾಯತದ ಕಾರ್ಯ ಕಲಾಪಗಳಲ್ಲಿ ಹಾಜರಾಗುವ ಜೊತೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಾಗೂ ಪರಿಷತ್ ಚುನಾವಣೆಯಲ್ಲಿಯೂ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ನಂತರದಲ್ಲಿ ಸುಮಾರು ಐದಾರು ಸಭೆಗಳಿಗೆ ಗ್ರಾ.ಪಂ ಸದಸ್ಯೆ ಲಕ್ಷ್ಮೀ ಗೊಂಡ ಹಾಜರಾಗಿದ್ದರು. ಸ್ಥಳೀಯ ವ್ಯಕ್ತಿ ಓರ್ವನ ದೂರಿನ ಮೇಲೆ , ಕೋರ್ಟ್ ಆದೇಶದ‌ ನಡುವೆಯೂ ಸಹ  ಜಾತಿ ಪ್ರಮಾಣ ಪತ್ರ ಪ್ರಶ್ನಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ( ಸಮಾಜಕಲ್ಯಾಣ ಇಲಾಖೆ) ಮತ್ತೆ ಹಿಂದಿನಂತೆ ಲಕ್ಷ್ಮೀ ಗೊಂಡ ಅವರನ್ನ ಅವರನ್ನ ಪಂಚಾಯತ ಸಭೆಗೆಗಳಿಗೆ ಆಹ್ವಾನ ನೀಡಂತೆ ಗ್ರಾಮ ಪಂಚಾಯತ ಅಧಿಕಾರಿಗೆ ಮೌಖಿಕ ಆದೇಶ ನೀಡಿದ್ದು,ಮೌಖಿಕ ಆದೇಶವನ್ನೆ ಅಧಿಕೃತ ಆದೇಶ ಎನ್ನುವ ರೀತಿಯಲ್ಲಿ ಪರಿಗಣಿಸಿದ ಪಂಚಾಯತ ಅಧಿಕಾರಿ ಲಕ್ಷ್ಮೀ ಗೊಂಡವರಿಗೆ ಮತ್ತೆ ಪಂಚಾಯತ ಸಭೆಗಳಿಗೆ ಹಾಜರಾಗದಂತೆ ತಿಳಿಸಿದ್ದರು.

ಇನ್ನೊಂದು ವಿಶೇಷ ಅಂದರೆ ಲಕ್ಷ್ಮೀ ಗೊಂಡ ಅವರು ಆಯ್ಕೆ ಆಗಿರುವ ದಿನದಿಂದ ಇಂದಿನ ವರೆಗೂ ಸಹ ಸರಕಾರದಿಂದ ಸಿಗುವ ಗೌರವ ಧನ ಅವರ ಖಾತೆಗೆ ಜಮಾ ಆಗುತ್ತಿದೆ. ಒಂದು ವೇಳೆ ಅವರ ಜಾತಿ ಪ್ರಮಾಣ ಪತ್ರ ಸರಿಯಿಲ್ಲದೆ ಸದಸ್ಯತ್ವ ರದ್ದಾಗಿದ್ದರೆ. ಗೌರವ ಧನ ಸಿಗಲು ಹೇಗೆ ಸಾಧ್ಯ..? ಆದರೆ ಒಂದು ಕಡೆ ಮಾನ್ಯ ನ್ಯಾಯಾಲಯ ಲಕ್ಷ್ಮೀ ಗೊಂಡ ಅವರ ಜಾತಿ ಪ್ರಮಾಣ ಪತ್ರ ಸರಿಯಾಗಿದೆ ಎಂದು ಎತ್ತಿಹಿಡಿದರೆ. ಇತ್ತ ಅಧಿಕಾರಿಗಳು ನ್ಯಾಯಯದ ಆದೇಶವೆ ಸರಿಯಾಗಿಲ್ಲ‌ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಯಾರ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳೆ ಇದಕ್ಕೆ ಉತ್ತರಿಸಬೇಕಿದೆ.