ಬೆಂಗಳೂರು : ರಾಜ್ಯ ವಿಧಾನಸಭಾ ಚುನಾಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರವು ಸಿದ್ಧತೆ ನಡೆಸಿದ್ದು, ಇದರ ನಡುವೆ ಯೋಜನೆಗಳಿಗೆ ಷರತ್ತು ಅನ್ವಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಯಾವ ಯೋಜನಗಳಿಗೆ ಯಾವ ಯಾವ ಕಂಡೀಷನ್ ಹಾಕಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಯೋಜನೆಗಳಿಗೆ ಯಾವ ಮಾರ್ಗ, ಸೂತ್ರ ಅನುಸರಿಸಬೇಕು ಎಂದು ಮಾರ್ಗಸೂಚಿ ಸಿದ್ದಪಡಿಸಿಕೊಂಡು ಬರುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜ್ಯದ ಹಲವು ಕಡೆ ಬಸ್ ನಲ್ಲಿ ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎಲ್ಲರಿಗೂ ಫ್ರೀ ಬಸ್ ಪಾಸ್ ಎಂದು ಘೋಷಣೆ ಮಾಡಿದ ಕಾಂಗ್ರೆಸ್ ಇದೀಗ ಷರತ್ತು ವಿಧಿಸಲು ಮುಂದಾಗಿದೆ.
ಮಹಿಳೆಯರು ಕರ್ನಾಟಕದವರೇ ಆಗಿರಬೇಕು. ಈ ಪಾಸ್ ನೀಡಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಕೆಂಪು ಬಸ್ ಗಳಲ್ಲಿ ಮಾತ್ರ ಫ್ರೀ ಬಸ್ ಪಾಸ್ ಅನ್ವಯವಾಗಲಿದ್ದು, ತಮ್ಮ ಊರಿನಿಂದ 50 ಕಿಮೀವರೆಗೆ ಮಾತ್ರ ಪ್ರಯಾಣ ಮಾಡಬಹುದು. ಈ ಎಲ್ಲಾ ಕಂಡೀಷನ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮುಂದಿನ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ 5 ಇಲಾಖೆಗಳ ಜೊತೆಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಜೂನ್ 1 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 5 ಗ್ಯಾರಂಟಿ ಯೋಜನೆ ಜಾರಿಗೆ ತರುವ ಸಂಬಂಧ ಅಧಿಕಾರಿಗಳಿಗೆ ಡೇಟಾ ಸಂಗ್ರಹಣೆ ಮಾಡುವಂತೆ ಹಾಗೂ ಗ್ಯಾರಂಟಿ ಯೋಜನೆಗಳ ಜಾರಿಗೆ ಎಷ್ಟು ಹಣ ಬೇಕು? ಯಾವ ರೀತಿ ಯೋಜನೆಗಳನ್ನು ಜಾರಿಗೆ ತರಬೇಕು? ಮಹಿಳೆಯರಿಗೆ 2,000 ರೂ. ನೀಡಲು ಅಂಕಿ-ಅಂಶಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ಐ.ಎಸ್.ಎನ್. ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದ್ದು, 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸುವಂತೆ ಸೂಚನೆ ನೀಡಿದ್ದಾರೆ.