ಸುದ್ದಿಬಿಂದು ಬ್ಯೂರೋ

ಶಿರಸಿ: ಆಕಸ್ಮಿಕ ಅಗ್ನಿ ಅವಘಡಕ್ಕೆ ಒಳಗಾಗಿ ಹಾನಿಗೊಳಗಾದ ತಾಲೂಕಿನ ಅಮಚಿಮನೆಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಸರಕಾರದಿಂದ ಸೂಕ್ತ ಪರಿಹಾರದ ಒದಗಿಸುವ ಭರವಸೆ ನೀಡಿದ್ದಾರೆ.

ಗುರುವಾರ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆ ಅವರಿಗೆ ಸೇರಿದ 2ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟ ಸುಟ್ಟು‌ ಕರಕಲಾದದ್ದನ್ನು ವೀಕ್ಷಿಸಿದ ಭೀಮಣ್ಣ, ನೊಂದ ರೈತರಿಗೆ ಸಾಂತ್ವನ ‌ಹೇಳಿದ್ದಾರೆ.

ಆಕಸ್ಮಿಕವಾಗಿ ಮಾಲ್ಕಿ ಬೆಟ್ಟಕ್ಕೆ ತಗುಲಿದ ಬೆಂಕಿ ಮಳೆಗಾಲದ ಮಣ್ಣಿನ ಸವಕಳಿ ತಡೆಗೆ ಮುಚ್ಚಿಗೆ ಮಾಡಲಾದ ಕರಡ, ಸೊಪ್ಪಿಗೂ ತಗುಲಿ ಅಡಿಕೆ, ಬಾಳೆ, ಕಾಳು‌ ಮೆಸಣು ಮರಗಿಡ ಸಂಪೂರ್ಣ ಸುಟ್ಟು ಹೋಗಿರುವದನ್ನು ವೀಕ್ಷಿಸಿ, ಸುಟ್ಟು ಹೋದ ಗಿಡಗಳನ್ನು‌ ಕಂಡು ಅವರೂ ವ್ಯಥೆಪಟ್ಟರು.

ನಾನೂ ಒಬ್ಬ ರೈತನಾಗಿದ್ದು, ಒಮ್ಮೆಲೆ ಅಡಿಕೆ ಬಾಳೆ, ಕಾಳುಮೆಣಸಿಗೆ ಹಾನಿ ಆದರೆ ಮತ್ತೆ ಬೆಳೆ ತೆಗೆಯಲು ಆರೆಂಟು ವರ್ಷಗಳೇ ಬೇಕಾಗುತ್ತವೆ. ಈಗಿನ ಬೆಳೆ ಹಾನಿ ಜೊತೆ‌ ಮುಂದಿನ ಅರೆಂಟು ವರ್ಷ ಬೆಳೆಯೂ ಇರುವದಿಲ್ಲ.ಮರು ನಾಟಿಯಿಂದ ಎಲ್ಲವೂ ವೆಚ್ಚದಾಯಕವೇ ಆಗಿದೆ. ಎಲ್ಲ ಸೇರಿದರೆ ಕೋಟಿಗೂ ಹೆಚ್ಚು ಹಾನಿ ಆಗುತ್ತದೆ. ಈ ಕಾರಣದಿಂದ ಸರಕಾರದಿಂದ ಗರಿಷ್ಟ ಪರಿಹಾರ‌ ಕೂಡ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೊಂದ ರೈತರಿಗೆ ಭರವಸೆ‌ ನೀಡಿದ್ದರು.ಯಾವುದೇ ಹಂತದ ಸಮಸ್ಯೆಗಳಾದರೂ ನಮ್ಮನ್ನು‌ ನೇರ ಸಂಪರ್ಕಿಸಿ. ಸರಕಾರ, ಜನಪ್ರತಿನಿಧಿ ಆದವನು ನೊಂದವರ ಜೊತೆಗೆ ಇರಬೇಕು ಎಂದು ನಂಬಿದವನು.

ಶಾಸಕ ಭೀಮಣ್ಣ ಅವರಿಗೆ‌ ಎಂ.ವಿ.ಹೆಗಡೆ, ಜಿ.ಪಂ.ಮಾಜಿ ಸದಸ್ಯ ಜಿ.ಎನ್.ಹೆಗಡೆ‌ ಮುರೇಗಾರ ಇತರರು ಬೆಂಕಿ ಅನಾಹುತದ ಮಾಹಿತಿ ಒದಗಿಸಿದರು.

ಈ ವೇಳೆ ಪ್ರಮುಖರಾದ ಎಸ್ಕೆ ಭಾಗವತ, ಗಣೇಶ ದಾವಣಗೆರೆ, ಅಧಿಕಾರಿಗಳಾದ ಬೆಳ್ಳೇಮನೆ, ಗ್ರಾ.ಪಂ. ಸದಸ್ಯ ಕಾಸಿಂ ಸಾಬ್, ಹುಲೇಕಲ್ ಗ್ರಾಪಂ ಪಿಡಿಓ ಉಪಸ್ಥಿತರಿದ್ದರು.