ಕಾರವಾರ: ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು, ಸಮಾವೇಶಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದವರಿಗೆ ನಿರಾಶೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಪ್ರಥಮ ಬಾರಿಗೆ ಜಿಲ್ಲೆಗೆ ಅದರಲ್ಲೂ ನನ್ನ ಕ್ಷೇತ್ರಕ್ಕೆ ಆಗಮಿಸಿದ್ದು ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಹಾಗೂ ಜನತೆಗೆ ಹೊಸ ಭರವಸೆ ದೊರೆತಂತಾಗಿದೆ. ದೇವ ಮಾನವ ಮೋದಿ ಅವರ ಪಾದಸ್ಪರ್ಷ ಹೊಸ ಅಭಿವೃದ್ಧಿಗೆ ಭಾಷ್ಯ ಬರೆದಿದೆ ಎಂದರು.ವಿರೋಧಿಗಳು ಎಷ್ಟೋ ಪ್ರಯತ್ನಪಟ್ಟರೂ ಅಂತಿಮವಾಗಿ ಕೋರ್ಟಿನ ಮೆಟ್ಟಿಲೇರಿದರೂ ಪಕ್ಷದ ಕಾರ್ಯಕರ್ತರ ಹಾಗೂ ನಿಮ್ಮೆಲ್ಲರ ಅಭೂತಪೂರ್ವ ಸಹಕಾರದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಜಿಲ್ಲೆಯ ಇತಿಹಾಸದಲ್ಲಿ ಅಜರಾಮರವಾಗಿರುವಂತೆ ನಡೆದಿದೆ ಎಂದರು.
ವಿರೋಧಿಗಳು ಎಷ್ಟರ ಮಟ್ಟಿಗೆ ಮೋದಿ ಅವರ ಆಗಮನವನ್ನು ಸಹಿಸಲಿಲ್ಲ ಎಂದರೆ ಮೋದಿ ಆಗಮಿಸಿ ತೆರಳುವವರೆಗೆ ಕಾರವಾರದ ಹಲವಾರು ಕಡೆಯಲ್ಲಿ ವಿದ್ಯುತ್ ವ್ಯತ್ಯಯ ಆಗುವಂತೆ ಮಾಡಿರುವುದು ಗಮನಕ್ಕೆ ಬಂದಿದೆ. ಜಗತ್ತೇ ಗೌರವಿಸುವ ಮಹಾನ್ ನಾಯಕನ ಬಗ್ಗೆ ಬೆರಳೆಣಿಕೆಯಷ್ಟು ವಿರೋಧಿಗಳು ವಿಕೃತಿ ಮೆರೆದಿದ್ದಾರೆ ಎಂದರು.ಜಪಾನ್ ನ ಎರಡು ಕೈಗಾರಿಕಾ ಮುಖ್ಯಸ್ಥರೊಡನೆ ಮಾತನಾಡಿ ಕಾರವಾರದಲ್ಲಿ ಕೈಗಾರಿಕೆಯ ಸ್ಥಾಪನೆ ಕೊನೆಯ ಹಂತದಲ್ಲಿದ್ದಾಗ ಕೊರೋನಾ ಎಂಬ ಮಹಾಮಾರಿಯಿಂದಾಗಿ ಜಪಾನ್ ನ ಕಂಪನಿ ಹಿಂದಿರುಗಿತು. 40,000 ಯುವಕ ಯುವತಿಯರಿಗೆ ಉದ್ಯೋಗ ನೀಡುವ ಕೆಲಸಕ್ಕೆ ಆ ಕಂಪನಿಗಳ ಜೊತೆ ಕೈಜೋಡಿಸಲಾಗಿತ್ತು.
ಆದರೆ ಹಿಂದಿನ ಯಾವುದೇ ಸರಕಾರ ಅಥವಾ ಶಾಸಕರು ನಿರುದ್ಯೋಗಿ ಯುವಕ ಯುವತಿಯರಿಗಾಗಿ ಕಾರವಾರ ದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಿಲ್ಲ ಬದಲಾಗಿ ಯುವಕರನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿದರು ಎಂದು ಹೇಳಿದರು.ಡಬಲ್ ಇಂಜಿನ್ ಬಿಜೆಪಿ ಸರಕಾರದ ಸಾಧನೆ ಶೂನ್ಯ ಎನ್ನುವ ಕಾಂಗ್ರೇಸಿನವರು ತಮ್ಮ ಡಬಲ್ ಇಂಜಿನ್ ಸರಕಾರ ಇದ್ದಾಗ ಕ್ಷೇತ್ರಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಆದರೆ ಬಿಜೆಪಿ ಡಬಲ್ ಇಂಜಿನ್ ಸರಕಾರ ಕಾರವಾರ-ಅಂಕೋಲಾ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿರುವುದನ್ನು ಇವರು ಸಹಿಸುತ್ತಿಲ್ಲ ಎಂದು ಆರೋಪಿಸಿದರು.
ಕಡವಾಡ ಕಾರವಾರದ ಪ್ರಾಚೀನ ಊರು. ರಾಜರು ಇಲ್ಲಿ ಆಳ್ವಿಕೆಮಾಡಿದ ಇತಿಹಾಸವಿದೆ. ಅಂತಹ ಊರಿಗೆ ಕಾಂಗ್ರೆಸ್ ಡಬಲ್ ಇಂಜಿನ್ ಸರಕಾರ ಒಂದು ಸೇತುವೆ ನಿರ್ಮಾಣ ಮಾಡಿರಲಿಲ್ಲ ಆದರೆ ನಿಜವಾದ ಡಬಲ್ ಇಂಜಿನ್ ಸರಕಾರ ಬಿಜೆಪಿ ಸರಕಾರ 10 ಕೋಟಿ ರೂ ವೆಚ್ಚದಲ್ಲಿ ಸುಭಧ್ರ ಸೇತುವೆ ನಿರ್ಮಿಸಿದೆ. ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ ಕಾರಣ ತಾವೆಲ್ಲರೂ ಮೋದಿ ಅವರು ಹೇಳಿದಂತೆ ಜೈ ಭಜರಂಗಬಲಿ ಎಂದು ಕಮಲದ ಗುರುತಿಗೆ ಮತನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಗದಲ್ಲಿ ಗಣಪತಿ ಉಳ್ವೇಕರ, ಬಿಜೆಪಿ ಗ್ರಾಮೀಣಾಧ್ಯಕ್ಷರಾದ ಸುಭಾಷ ಗುನಗಿ, ಕಾರವಾರ ನಗರಸಭೆ ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ, ಕಡವಾಡ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಸುಧೀರ ಸಾಳಸಕರ, ಸದಸ್ಯರಾದ ಸಾಧನಾ ಆಮ್ಲೆಕರ್, ಪ್ರಿಯಾಂಕಾ ತಳೇಕರ, ಕಿಶೋರ್ ಕಡವಾಡಕರ ಸ್ಥಳೀಯರಾದ ಮಹೇಶ ದೇವಳಿ, ದೇವಿದಾಸ ತಳೇಕರ, ವಿಷ್ಣು ಗಾಯಕ, ಪ್ರಭಾಕರ ಮಾಂಜ್ರೇಕರ, ದಿಂಗಾ ಗುನಗಿ, ಬೂತ್ ಅಧ್ಯಕ್ಷರಾದ ಗಣೇಶ ಕುರಡೇಕರ, ಚಂದ್ರಕಾಂತ ಗುನಗಿ, ರಾಜೇಶ ಬೊವಿ, ರಾಜು ಕಳಸ, ಸಂತೋಷ ದುದಾಳ್ಕರ, ಸುರೇಂದ್ರ ಮಾಂಜ್ರೇಕರ, ನಂದನ ಮಾಂಜ್ರೇಕರ, ವಿಲ್ಸಿ ಡಯಾಸ್ ಹಾಗೂ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.