ಸುದ್ದಿಬಿಂದು ಬ್ಯೂರೋ
ಕಾರವಾರ
: ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊರತು ಪಡಿಸಿ‌ ಬಿಜೆಪಿ,ಜೆಡಿಎಸ್ ಹಾಗೂ ಆಮ್ ಆದ್ಮಿ ಕೂಡ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಆದರೆ ಕಾಂಗ್ರೆಸ್ ಮಾತ್ರ ಈ ಹಿಂದೆ ನೀಡಿದ್ದ ಮಹಿಳಾ  ಕ್ಷೇತ್ರವನ್ನ ಕಸಿದುಕೊಳ್ಳುವ ಮೂಲಕ ಮಹಿಳೆಯರ ವಿರೋಧಕ್ಕೆ ಕಾರಣವಾಗಿದೆ.

ಬಿಜೆಪಿ ಹಾಗೂ ಜೆಡಿಎಸ್ ಈ ಎರಡು ಪಕ್ಷದವರು ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದರೆ. ಆಮ್ ಆದ್ಮಿ ಪಾರ್ಟಿ ಈ ಬಾರಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಮೂಲಕ ಮಹಿಳೆಯರಿಗೆ ಈ ಮೂರು ಪಕ್ಷದಿಂದ ನ್ಯಾಯ ಸಿಕ್ಕಂತಾಗಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ‌ನಿಂದ ಮಾತ್ರ ಉತ್ತರಕನ್ನಡ ಜಿಲ್ಲೆಯಲ್ಲಿ ಮಹಿಳೆಯರನ್ನ ಕಡೆಗಣಿಸಿದಂತಾಗಿದೆ.

ಈ ಹಿಂದೆ ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಶಾರದಾ ಮೋಹನ್ ಶೆಟ್ಟಿ ಅವರಿಗೆ ಟಿಕೇಟ್ ನೀಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಮಹಿಳೆಯೋರ್ವಳಿಗೆ ಸ್ಥಾನಮಾನ ನೀಡಿತ್ತು. ಆದರೆ ಈ ಬಾರಿ ಕುಮಟಾ ಕ್ಷೇತ್ರಕ್ಕೆ ಅಂತಲ್ಲ. ಜಿಲ್ಲೆಯ ಯಾವ ಒಂದು ಕ್ಷೇತ್ರದಲ್ಲಿಯೂ ಮಹಿಳಾ ಅಭ್ಯರ್ಥಿಯನ್ನ ಕಣಕ್ಕೆ ಇಳಿಸದೆ ಮಹಿಳಾ ವಿರೋದಿ ಎನ್ನುವ ಹಣೆಪಟ್ಟಿಯನ್ನ ಕಾಂಗ್ರೆಸ್ ಕಟ್ಟಿಕೊಳ್ಳುವಂತಾಗಿದೆ.

ಇಂದಿರಾ ಕಾಲದಿಂದಲ್ಲೂ ಉತ್ತರಕನ್ನಡ ಜಿಲ್ಲೆಯ ಮಹಿಳೆಯರು ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪರ ನಿಂತುಕೊಂಡಿದ್ದರು‌. ಮಾರ್ಗರೇಟ್ ಆಳ್ವಾ ಅವರನ್ನ ಸಂಸದರನ್ನಾಗಿ ಆಯ್ಕೆ ಮಾಡಲಾಗಿತ್ತು. ಶುಭಲತಾ ಅಸ್ನೋಟಿಕರ್ ವಿಧಾನಪರಿಷತ್ ಸದಸ್ಯೆ ಸಹ ಆಗಿದ್ದರು. 1962ರಲ್ಲಿ  ವಸಂತಲತಾ ಮಿರ್ಜಾನ್ಕರ್ ಸ್ಪರ್ಧೆ ಮಾಡಿದ್ದರು, ಕಾಂಗ್ರೆಸ್ ನಿಂದ ಅನೇಕರು ಜಿಲ್ಲಾಪಂಚಾಯತ್ ಅಧ್ಯಕ್ಷರಾಗಿ , ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಇಷ್ಟೆಲ್ಲಾ ಇತಿಹಾಸ ಇದ್ದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯ ಯಾವ ಒಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಟಿಕೆಟ್ ನೀಡದೆ .ಮಹಿಳೆಯರ ವಿರೋಧಕ್ಕೆ ಕಾರಣವಾಗಿದೆ.

ಶಾರದಾ ಶೆಟ್ಟಿ ಅವರು ಶಾಸಕರಾದ ಅವಧಿಯಲ್ಲಿ ಇದುವರೆಗೆ ಶಾಸಕರಾಗಿದ್ದಾಗ ಮಾಡದೆ ಇರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಮಾಡುವ ಮೂಲಕ ಇಂದಿಗೂ ಅವರು ಜನಮನ್ನಣೆ ಗಳಿಸಿಕೊಂಡಿದ್ದಾರೆ. ಆದರೆ ಕಳೆದ ಬಾರಿ ಹಿಂದುತ್ವದ ಅಲೆಯಲ್ಲಿ ಶಾರದಾ ಶೆಟ್ಟಿ ಅವರು ಸೋಲಿವಂತಾ ಪರಿಸ್ಥಿತಿ ಎದುರಾಯಿತು. ಆದರೆ ಪಕ್ಷದ ಹೈಕಮಾಂಡ‌ ಕಳೆದ ಬಾರಿ ಜಿಲ್ಲೆಯಲ್ಲಿ ಹಿಂದೂತ್ವದ ಅಲೆಯಲ್ಲಿ ತಮ್ಮ ಅಭ್ಯರ್ಥಿಗಳು ಸೋಲುವಂತಾಯಿತು ಎಂದು ಮನಗಂಡ ಕಾಂಗ್ರೆಸ್ ಹೈಕಮಾಂಡ ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರದ ಪೈಕಿ ಎರಡು ಕ್ಷೇತ್ರದಲ್ಲಿ ಮಾಜಿ ಶಾಸಕರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಆದರೆ ಕುಮಟಾ ಕ್ಷೇತ್ರದಲ್ಲಿದ್ದ ಓರ್ವ‌ ಮಾಜಿ ಮಹಿಳಾ ಶಾಸಕಿಗೆ ಟಿಕೆಟ್ ಕೈತಪ್ಪಿಸಿರುವುದು ಮಹಿಳೆಯರ ಅಸಮಧಾನಕ್ಕೆ ಕಾರಣವಾಗಿದೆ..