ಸುದ್ದಿಬಿಂದು ಬ್ಯೂರೋ
ಕುಮಟಾ : ಚುನಾವಣೆ ಬಂತೆಂದರೆ ಸಾಕು, ಕೆಲವೊಂದಿಷ್ಟು ಜನರಿಗೆ ಹಬ್ಬವೋ ಹಬ್ಬ. ಐದ್ನೂರು ಕೊಟ್ಟರೆ ಈ ಕಡೆ, ಸಾವಿರ ಕೊಟ್ಟರೆ ಆ ಕಡೆ ಹೋಗುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಆಡಳಿತಾರೂಡ ಅಲೆಯಲ್ಲಿ ಇರುವ ಶಾಸಕರು ತಮ್ಮ ಕ್ಷೇತ್ರದ ಮತದಾರರ ವಿಶ್ವಾಸಗಳಿಸಲಾಗದೆ ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತರುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಕ್ಷೇತ್ರದಲ್ಲಿ ಈ ಬಾರಿ ಜೋರಾಗಿ ನಡೆಯುತ್ತಿದೆ. ಈ ರಾಜಕಾರಣಿಗಳು ತಮ್ಮ ನಾಮಪತ್ರ ಸಲ್ಲಿಕೆ ಸಂದರ್ಭ, ಸಮಾವೇಶ ಇವೆಲ್ಲದರಲ್ಲೂ ಜನ ಸೇರಿಸಿ ಪಕ್ಷದ ನಾಯಕರ ಎದುರು ಮೆಚ್ಚುಗೆ ಪಡೆಯಬೇಕು ಎಂದು ಯಾವ ರೀತಿಯ ಕಸರತ್ತು, ಮಸಲತ್ತು ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ.
ಈ ಪದ್ದತಿ ಕಾನೂನು ರೀತಿಯಲ್ಲಿ ಜಾರಿಗೆ ಬರುವ ಹಾಗೆ 2004ರಿಂದ ಜಾರಿಗೆ ಬಂದಿದೆ ಎಂದರೆ ನಿಜಕ್ಕೂ ತಪ್ಪಾಗುವುದಿಲ್ಲ. ಯಾಕೆಂದರೆ ಆ ಸಮಯಲ್ಲಿ ಈ ಜಿಲ್ಲೆಯಲ್ಲಿ ಅದಿರು ವ್ಯವಹಾರ ಜೋರಾಗಿತ್ತು. ಅನೇಕರು ಈ ಅದಿರು ವ್ಯವಹಾರದಲ್ಲಿ ಇದಿದ್ದರಿಂದ ಎಲ್ಲರ ಕೈಯಲ್ಲೂ ಅದಿರಿನ ಹಣ ಜೋರಾಗಿ ಹರಿದಾಡುತ್ತಿತ್ತು.ಹೀಗಾಗಿ ಆ ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ ಹಂಚುವ ರೂಡಿ ಚಾಲ್ತಿಗೆ ಬಂತು. ಅದರೆ ಈಗ ಇದು ವಿಪರೀತವಾಗಿ ಮುಂದುವರೆದಂತೆ ಕಾಣುತ್ತಿದೆ. ಸದ್ಯ ಆಡಳಿತ ವಿರೋಧಿ ಅಲೆ ಇರುವ ಕಾರಣ ಸ್ಥಳೀಯ ಜನರು ಬರಲು ಹಿಂದೆಟ್ಟು ಹಾಕುತ್ತಿದ್ದಾರೆ. ಹೀಗಾಗಿ ಏನಾದರೂ ಮಾಡಿ ಜನ ಸೇರಿಸಬೇಕು ಎಂದು ಈ ರೀತಿಯಲ್ಲಿ ಜನರನ್ನು ಸೇರಿಸಿ ತಮ್ಮ ವಿರೋಧಿಗಳ ಎದುರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ಪಕ್ಕದ ಉಡುಪಿ ಜಿಲ್ಲೆಯ ಶಿರೂರು, ಬೈಂದೂರು, ಹಾಗೂ ಉತ್ತರ ಕನ್ನಡ ಜಿಲ್ಲೆಯ ತಮ್ಮದಲ್ಲದ ಕ್ಷೇತ್ರದಿಂದಲ್ಲೂ ಜನರನ್ನು ಕರೆತರುತ್ತಿದ್ದಾರಂತೆ. ಒಬ್ವರಿಗೆ ಐದ್ನೂರು ರೂಪಾಯಿಂದ ಆರಂಭವಾಗಿ ಎರಡು ಸಾವಿರದವರೆಗೂ ಹಣವನ್ನು ಕೊಟ್ಟು ಜನರನ್ನು ಕರೆತರುತ್ತಿದ್ದಾರಂತೆ. ಪ್ರಚಾರಕ್ಕಾಗಿ ತಾವು ಪಕ್ಕದ ಜಿಲ್ಲೆ, ತಾಲೂಕುಗಳಿಂದ ಬಂದಿರುವ ಬಗ್ಗೆ ಕೆಲವಷ್ಟು ಜನರು ಒಪ್ಪಿಕೊಂಡಿದ್ದು, ಅವೆಲ್ಲವನ್ನೂ ಕೆಲವರು ತಮ್ಮ ಮೊಬೈಲುಗಳಲ್ಲಿ ಸೆರೆ ಹಿಡಿದು ವೈರಲ್ ಸಹ ಮಾಡುತ್ತಿದ್ದಾರೆ. ಇವರ ಈ ನಾಟಕ ನೋಡಿದ ಪ್ರಜ್ಞಾವಂತರು ಅಸಹ್ಯಪಡುತ್ತಿದ್ದಾರೆ.