ಸುದ್ದಿಬಿಂದು
ಕುಮಟಾ : ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾರದಾ ಶೆಟ್ಟಿ ಅವರ ಅವಭಿಮಾನಿಗಳು ಇಂದು ಶಾರದಾ ಶೆಟ್ಟಿ ಅವರ ಮನೆಯಲ್ಲಿ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗಿದ್ದು,ಈ ವೇಳೆ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಅನೇಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಸಭೆಯಲ್ಲಿ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿದ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಯಿತು. ಬಳಿಕ ಮೀನುಗಾರ ಮುಖಂಡ ಶಿವರಾಮ ಹರಿಕಂತ್ರ ಸೇರಿದಂತೆ, ಇತರರು ಮಾತನಾಡಿ, ನಾವು ಒಮ್ಮೆಲೆ ದುಡುಕಿನ ನಿರ್ಣಯ ಕೈಗೊಳ್ಳುವುದು ಬೇಡ. ಚುನಾವಣೆ ಬಳಿಕ ನಮ್ಮದೆ ಸರ್ಕಾರ ಬರುವ ಸಾಧ್ಯತೆ ಜಾಸ್ತಿಯಾಗಿದೆ. ಬಂಡಾಯ ಸ್ಪರ್ಧೆ ಮಾಡಿ, ಪಕ್ಷದೊಳಕ್ಕೆ ಇರಿಸುಮುರಿಸು ಎದುರಿಸುವ ಮೂದಲು ಇನ್ನೊಮ್ಮೆ ಶಾರದಾ ಶೆಟ್ಟಿ ಅವರು ಯೋಚಿಸಬೇಕು. ನಿಮ್ಮ ನಿರ್ಧಾರಕ್ಕೆ ನಾವು ಬದ್ಧ. ಆದರೆ ನಿಮ್ಮ ಮುಂದಿನ ರಾಜಕೀಯ ಭವಿಷ್ಯವನ್ನಿಟ್ಟುಕೊಂಡು ನಿರ್ಧಾರ ಕೈಗೊಳ್ಳುವುದು ಉತ್ತಮ ಎಂಬ ಸಲಹೆ ಕೂಡ ನೀಡಿದರು.
ಕೂಜಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಜಾನನ ನಾಯ್ಕ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಮೂರು ದಶಕಗಳ ಕಾಲ ಕಟ್ಟಿ ಬೆಳೆಸಿದ್ದು, ದಿ. ಮೋಹನ ಶೆಟ್ಟಿ ಕುಟುಂಬವಾಗಿದೆ. ಶಾರದಾ ಶೆಟ್ಟಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರಾದ್ಯಂತ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕಳೆದ ಬಾರಿ ಅವರಿಗೆ ಸೋಲಾದರೂ ಅವರ ಬಳಿ ಅಧಿಕಾರವಿಲ್ಲದಿದ್ದರೂ ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ, ಬೆಳೆಸಿದ್ದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಅನ್ಯಾಯ ಮಾಡಲಾಗಿದೆ. ಅವರು ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವೆಲ್ಲ ಬದ್ಧರಾಗಿ ಕೆಲಸ ಮಾಡುತ್ತೇವೆ. ಪಕ್ಷದಲ್ಲಿ ದುಡಿದವರಿಗೆ ಅರ್ಹ ಸ್ಥಾನ-ಮಾನ ಸಿಗಬೇಕು. ಅರ್ಹತೆ ಇಲ್ಲದವರಿಗೆ ಯಾರದ್ದೊ ಲಾಬಿ, ಒತ್ತಡಕ್ಕೆ ಮಣಿದು ಕೆಲಸ ಮಾಡಿದವರನ್ನು ಕಡೆಗಣಿಸಿದರೆ ಪಕ್ಷ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟಸಾಧ್ಯ. ಶಾರದಾ ಶೆಟ್ಟರು ಬಂಡಾಯವಾಗಿ ಸ್ಪರ್ಧೆ ಮಾಡಿದರೆ ಖಂಡಿತ ಅವರ ಬೆನ್ನಿಗೆ ನಾವು ನಿಂತು ಗೆಲ್ಲಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.