ಸುದ್ದಿಬಿಂದು ಬ್ಯೂರೋ
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡಿಗೆ ತೀವ್ರ ತಲೆನೋವು ತಂದಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಮುಂದಿನ ವರ್ಷವೇ ಸಂಸತ್ ಚುನಾವಣೆಯೂ ಇದ್ದು, ಯಾವ ಸಮುದಾಯವನ್ನು ಕಡೆಗಣಿಸದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವಿದೆ.
ಈಗಾಗಲೇ ಶ್ರೀ ಪ್ರಣವಾನಂದ ಸ್ವಾಮಿ ಜಿಲ್ಲೆಯ ನಾಮಧಾರಿಗಳ ಪರ ಬ್ಯಾಟ್ ಬೀಸುತ್ತ ಜಿಲ್ಲೆಯ ಪ್ರಭಾವಿ ರಾಜಕಾರಣಿ ದೇಶಪಾಂಡೆ ವಿರುದ್ಧ ಗುಡುಗಿದ್ದಲ್ಲದೇ ಜಿಲ್ಲೆಯಲ್ಲಿ ಪಾದಯಾತ್ರೆಯನ್ನು ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ನಾಮಧಾರಿ ಸಮುದಾಯದ ಉ. ಕ. ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ ಅವರ ಹೆಸರು ಮುನ್ನಲೆಗೆ ಬಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈವರೆಗೆ ಮಾಜಿ ರಾಜ್ಯಪಾಲೆ ಅವರ ಪುತ್ರನ ಹೆಸರು ಚಾಲ್ತಿಯಲ್ಲಿತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಇದೀಗ ಮಂಜುನಾಥ ನಾಯ್ಕರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.
ನಾಳೆ ಕಾಂಗ್ರೆಸ್ ಕಮಿಟಿಯ ಮೀಟಿಂಗ್ ಇದ್ದು, ಮೀಟಿಂಗ್ ನಂತರವೇ ಅಂತಿಮ ಅಭ್ಯರ್ಥಿಯ ಹೆಸರು ಹೊರಬರಲಿದೆ. ಅಕಸ್ಮಾತ್ ಇಬ್ಬರೂ ಪಟ್ಟು ಸಡಿಲಿಸದಿದ್ದರೆ ಅಭ್ಯರ್ಥಿ ಆಯ್ಕೆ ಇನ್ನೂ ಮುಂದಕ್ಕೆ ಹೋದರೂ ಅಚ್ಚರಿಯಿಲ್ಲ.