ಸುದ್ದಿಬಿಂದು ಬ್ಯೂರೋ ವರದಿ
ಮೈಸೂರು: ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ಬಳಸಿ ಫೋನ್‌ಪೇ ಮೂಲಕ 80 ಸಾವಿರ ರೂ.ಗಳನ್ನು ಮೋಸದಿಂದ ವರ್ಗಾಯಿಸಿಕೊಂಡು, ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಆರೋಪಿಗಳನ್ನು ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 19 ರಂದು ಅಂಕನಾಯಕ ಬಿನ್ ಸಣ್ಣಸಿದ್ದನಾಯಕ (ಬೆಂಕಿಪುರ ಗ್ರಾಮ, ಹುಣಸೂರು ತಾಲೂಕು) ಅವರು ನೀಡಿ ದೂರಿನ ಮೇಲೆ, ಡಿ. 16ರಂದು ಅವರ ತಮ್ಮ ಗಣೇಶ್ ಅವರು ಕಡಕೊಳ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ವಾಪಸ್ ಬರುವಾಗ ನಾಯಿ ಅಡ್ಡ ಬಂದ ಪರಿಣಾಮ ಬಿದ್ದು ಪ್ರಜ್ಞೆ ತಪ್ಪಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು “ಆಸ್ಪತ್ರೆಗೆ ಸೇರಿಸುತ್ತೇವೆ” ಎಂದು ಹೇಳಿ ಮೊಬೈಲ್ ಪಡೆದು, ಯುಪಿಐ ಪಿನ್ ನಂಬರ್ ತಿಳಿದುಕೊಂಡು ಗಣೇಶ್ ಅವರ ಫೋನ್‌ಪೇ ಖಾತೆಯಿಂದ 80,000 ರೂ.ಗಳನ್ನು ವರ್ಗಾಯಿಸಿಕೊಂಡು, ಆಸ್ಪತ್ರೆಗೆ ದಾಖಲಿಸದೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದರು.

ಈ ಸಂಬಂಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಮಲ್ಲಿಕ್ ಹಾಗೂ ಎಲ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ, ಮೈಸೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಆರ್. ಶ್ರೀಕಾಂತ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು.

ತನಿಖೆಯ ವೇಳೆ ಆರೋಪಿಗಳಾದ ರಮೇಶ್.ಜಿ,‌ ಕೊರಮ ಜನಾಂಗ, ಹಂದಿ ಸಾಕಾಣಿಕೆ ಕೆಲಸ, ಮಹದೇವಪುರ, ಮೈಸೂರು
ಮನು ಕೊರಮ ಜನಾಂಗ, ಹಂದಿ ಸಾಕಾಣಿಕೆ ಕೆಲಸ, ರಾಮಬಾಯಿ ನಗರ, ಮೈಸೂರು
ಇವರನ್ನು ಮೈಸೂರು ತಾಲೂಕಿನ ರಾಮಬಾಯಿ ನಗರದಲ್ಲಿ ಬಂಧಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ಗಳು ಹಾಗೂ ನೊಂದ ವ್ಯಕ್ತಿಯಿಂದ ಮೋಸದಿಂದ ಪಡೆದಿದ್ದ 80,000 ರೂ.ಗಳನ್ನು ವಶಕ್ಕೆಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಯಶಸ್ವಿ ಕಾರಣರಾದ ಪೊಲೀಸ್ ಉಪಾಧೀಕ್ಷಕ ಆರ್. ಶ್ರೀಕಾಂತ್, ಪೊಲೀಸ್ ನಿರೀಕ್ಷಕ ಸುನೀಲ್ ಎಸ್.ಪಿ, ಪೊಲೀಸ್ ಉಪನಿರೀಕ್ಷಕ . ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಎಸ್ (ಸಿಹೆಚ್‌ಸಿ 220), ಶ್ರೀ. ರಂಗಸ್ವಾಮಿ ಹೆಚ್.ವಿ (ಸಿಹೆಚ್‌ಸಿ 101), ಶ್ರೀ. ಬಸವರಾಜು (ಸಿಪಿಸಿ-159) ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್. ಐಪಿಎಸ್ ಅವರು ಶ್ಲಾಘಿಸಿದ್ದಾರೆ.