ಧರ್ಮಸ್ಥಳಕ್ಕೆ ಬಂದ ಬುರುಡೆ ದಾಸನ ರಹಸ್ಯ..!!
ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಬುರುಡೆ ಸಹಿತ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದ ಬುರುಡೆ ದಾಸನ ರಹಸ್ಯ ಬಯಲಾಗುತ್ತಿರುವಂತೆ ಕಾಣುತ್ತಿದೆ.
ಈಗಾಗಲೇ ಆತ ಸೂಚಿಸಿದಂತೆ 17 ಸ್ಥಳಗಳಲ್ಲಿ ಉತ್ಖನನ ಮಾಡಲಾಗಿದ್ದು, ಒಂದು ಸ್ಥಳದಲ್ಲಿ ಮೂಳೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಅದನ್ನು ಹೊರತುಪಡಿಸಿದರೆ ಅನಾಮಿಕ ಗುರುತಿಸಿದ ಯಾವುದೇ ಸ್ಥಳದಲ್ಲೂ ಅಸ್ತಿಪಂಜರದ ಸುಳಿವೇ ಸಿಕ್ಕಿಲ್ಲ. ಇದುವರೆಗೆ ಕಾರ್ಯಚರಣೆ ನಡೆಸಿದ ಎಸ್‌ಐಟಿ ತಂಡ ಇಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಈ ನಡುವೆ ರಾಷ್ಟ್ರೀಯ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಅನಾಮಿಕನ ಸಂದರ್ಶನ ಮಾಡಿದ್ದು, “ಶವ ಹೂಳುವ ವೇಳೆ ನಿನ್ನ ಜೊತೆ ಎಷ್ಟು ಜನ ಇದ್ದರು?” ಎಂಬ ಪ್ರಶ್ನೆ ಕೇಳಿದರು. ಆಗ ಅನಾಮಿಕನು ಐದಾರು ಮಂದಿ ಸೇರಿ ಶವ ಹೂತಿದ್ದೇವೆ ಎಂದು ಹೇಳುತ್ತಾ, ಶವ ಹೂಳುವ ವೇಳೆ ಮಾರ, ರಾಜು, ರಂಗ, ತಲಾಸಿ ಹೀಗೆ ಕೆಲವರ ಹೆಸರನ್ನು ಉಲ್ಲೇಖಿಸಿದ್ದಾನೆ.
ಆ ಹೆಸರನ್ನು ಹೇಳುವಾಗ ಪದೆಪದೆ ಪಕ್ಕಕ್ಕೆ ತಿರುಗಿ ನೋಡುತ್ತಿದ್ದಾಗ, ಪಕ್ಕದಲ್ಲೇ ಕುಳಿತಿದ್ದ ಒಬ್ಬ ವ್ಯಕ್ತಿ “ಹೆಸರು ಹೇಳಬೇಡ” ಎಂದು ಎಚ್ಚರಿಸುತ್ತಿರುವ ಧ್ವನಿ ಕೇಳಿಬಂದಿದೆ. ಆ ಹಿಂಬದಿಯಿಂದ ಕೇಳಿಬಂದ ಧ್ವನಿ ಗಿರೀಶ ಮಟ್ಟಣ್ಣನವರ್ ಅವರದ್ದೆಂದು ಹೇಳಲಾಗುತ್ತಿದ್ದು, ಅನಾಮಿಕನ ಈ ಎಲ್ಲಾ ನಟನೆಗೆ ಮಟ್ಟಣ್ಣನವರ್ ಗ್ಯಾಂಗ್ ನಿರ್ದೇಶನ ಇದೆ ಎನ್ನಲಾಗುತ್ತಿದೆ.
ಅದೇ ರೀತಿ, ಈ ಅನಾಮಿಕನು ನಿತ್ಯವೂ ಉತ್ಖನನದ ಬಳಿಕ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಇದನ್ನ ಪರಿಶೀಲಿಸಿದಾಗ, ಆತ ಧರ್ಮಸ್ಥಳದ ವಿರುದ್ಧ ಹೋರಾಟ ಮಾಡುತ್ತಿದ್ದ ಮಹೇಶ್ ತಿಮರೋಡಿ ಅವರ ಮನೆಯಲ್ಲಿ ವಾಸಿಸುತ್ತಿದ್ದು, ಅಲ್ಲಿಂದಲೇ ಪ್ರತಿದಿನ ಎಸ್‌ಐಟಿ ತನಿಖೆಗೆ ಹಾಜರಾಗುತ್ತಿದ್ದನೆಂಬ ಸಂಗತಿ ಕೇಳಿ ಬರುತ್ತಿದೆ. ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದಲೇ ಅನಾಮಿಕನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.