suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಶಾಂತಿಯುತವಾಗಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೆ ಶೇ 75 ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 16.41.156ಮತದಾರರಿದ್ದು, ಅದರಲ್ಲಿ 11,58,815 ಮಂದಿ ಮತದಾನ ಮಾಡಿದ್ದಾರೆ.

ವಿಧಾನ ಸಭಾ ಕ್ಷೇತ್ರವಾರು ನೋಡುವುದಾದರೆ. ಶಿರಸಿ 74.65%ಮತದಾನ, ಯಲ್ಲಾಪುರ 74.17%, ಖಾನಾಪುರ 69.59%, ಹಳಿಯಾಳ 70.24%, ಕುಮಟಾ 71.50%, ಭಟ್ಕಳ 69.43%, ಕಾರವಾರ 68.08%, ಕಿತ್ತೂರು 67.94% ಮತದಾನವಾಗಿದೆ‌.

ಇನ್ನೂ ಬೆಳಿಗ್ಗೆ 7ಗಂಟೆಗೆ ಜಿಲ್ಲೆಯಲ್ಲಿ ಮತದನ ಆರಂಭವಾಗಿತ್ತು, ಮತದಾನದ ಬಳಿಕ ಜಿಲ್ಲೆಯಲ್ಲಿ ಒಟ್ಟು 52ಕಡೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು.ಎಲ್ಲವನ್ನೂ ಸಹ ಕೆಲ ಗಂಟೆಯಲ್ಲಿ ಬದಲಾವಣೆ ಮಾಡುವ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಶಿರಸಿಯ ಮಾರಿಕಾಂಬಾ ದೇವಾಲಯದ ಹಿಂಭಾಗದಲ್ಲಿ ನಡೆದ ಮತಗಟ್ಟೆ 112ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಓರ್ವರು ಅಸ್ವಸ್ಥಗೊಂಡ ಘಟನೆ ಸಹ ನಡೆಯಿತು.ಯುವತಿ ಓರ್ವಳು ಕಾಲು ಮುರಿತಕ್ಕೆ ಒಳಗಾಗಿದ್ದರು ಸಹ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಬಂದು ಕಾರವಾರದ ಸೆಂಟ್ ಮೈಕಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಖಾನಾಪುರ ನಿಟ್ಟೂರು ಮತಗಟ್ಟೆ 125ರ ಸರಕಾರಿ ಹಿರಿಯ ಪ್ರಥಮಿಕ ಮರಾಠಿ ಶಾಲೆಯ ಮತಗಟ್ಟೆ ಬಳಿ ಬಿಜೆಪಿ ಶಾಲು,ಚಿಹ್ನೆ ಧರಿಸಿ ಮತಗಟ್ಟರ ಬಳಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆಯಿತು.

ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಮಗಳ ಜೊತೆಗೆ ಬಂದು ಕಾರವಾರ ನಗರದ ಅಲಿಗದ್ದ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ ಮಾಡಿದರು. ಜಿಲ್ಲಾಧಿಕಾರಿ ಅವರ ಪುತ್ರಿ ತ್ರಿಶಿಕಾ ಮೊದಲ ಬಾರಿಗೆ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಖಾನಾಪುರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡುಮಕ್ಕಳ ಶಾಲೆಯ ಮತಗಟ್ಟೆ 116ರಲ್ಲಿ ಬೆಂಬಲಿಗರೊಂದಿಗೆ ಬಂದು ಮತದಾನ ಮಾಡಿದರು.

ಶಿರಸಿಯ ಮಾರಿಕಾಂಬಾ ಕಾಲೇಜ್ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಪ್ರನಾಳಿಕೆ ಹಾಗೂ ಕೇಂದ್ರ ಸರಕಾರದ ದುರಾಡಳಿದ ಪ್ರದರ್ಶಿಸುವ ಟೀ ಶರ್ಟ್ ಮೇಲೆ ಬಗೆ ಬಗೆಯ ಚಿತ್ರ ಹಾಗೂ ಘೋಷ ವ್ಯಾಕ್ ಬಿಡಿಸಲಾಗಿದ್ದ ಟೀ ಶರ್ಟ್ ಧರಸಿ ಗಮನ ಸೆಳೆದರು.

ಈ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವಕುಮಾರ ಹಾಗೂ ನಟ ಶಿವರಾಜ್ ಕುಮಾರ ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಜೊತೆಗೂಡಿ ಬಂದ ಗೀತಾ ಶಿವರಾಜ್ ಕುಮಾರ ನಗರದ‌ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳು ವೈದ್ಯ ಅವರು ಭಟ್ಕಳದ ಬಿದ್ರಮನೆ ಸರಕಾರಿ ಶಾಲೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರು..

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ನಿ ಹಾಗೂ ಇಬ್ಬರೂ ಮಕ್ಕಳೊಂದಿಗೆ ಶಿರಸಿ ತಾಲೂಕಿನ ಬರೂರ ಹೋವಳಿಯ ಕುಳವೆ ಗ್ರಾಮದ ಜನತಾ ವಿದ್ಯಾಲಯದಲ್ಲಿ ಮತದಾನ ಮಾಡಿದ್ದರು.

ಕುಮಟಾ ಪಟ್ಟಣರ ಗಿಬ್ ಆಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯ ಗೋಡೆಯ ಮೇಲೆ ನಮ್ಮ ಮತ ನಮ್ಮ ಶಕ್ತಿ ಎಂದು ಬರೆದಿರುವ ಬಗ್ಗೆ ಕುಮಟಾ ಶಾಸಕ ದಿನರಕ ಶೆಟ್ಟಿ ಅವರು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಬರಹಕ್ಕೆ ಪೇಪರ್ ಹೆಚ್ಚುವ ಮೂಲಕ ಮುಚ್ಚಲಾಯಿತು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಹ ಪತ್ನಿ ಹಾಗೂ ಮಗನ ಜೊತೆ ಸೇರಿ ಬಂದು ತಮ್ಮ ಮತದಾನ ಮಾಡಿದ್ದರು.

ಕುಮಟಾ ಕ್ಷೇತ್ರದ ಜೆಡಿಎಸ್‌ ಮುಖಂಡ‌‌ ಸೂರಜ್‌ ನಾಯ್ಕ ಸೋನಿ ‌ಪತ್ನಿ ವೀಣಾ ಸೂರಜ್ ನಾಯ್ಕ ಜೊತೆಯಲ್ಲಿ ಬಂದು ಮತದಾನ ಮಾಡಿದರು..
ಮುಂಡಗೋಡ ತಾಲೂಕಿನ ಬಸಾಪುರದಲ್ಲಿ ಮತದಾನ ಬಹಿಷ್ಕಾರ, ಮೂಲಭೂತ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌ ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನದಿಂದ ದೂರ ಉಳಿದರು. ಸುಮಾರು 400 ಕ್ಕೂ ಹೆಚ್ಚು ಜನಸಂಖ್ಯೆಯಲ್ಲಿ ಈ ಗ್ರಾಮದಲ್ಲಿ‌ ಮತದಾರರಿದ್ದರು.

ಉತ್ತರಕನ್ನಡ ಜಿಲ್ಲೆಯ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ಸಂಜೆ ಶಿರಸಿ ನಗರದ ಕೆಎಚ್‌ಬಿ ಕಾಲೋನಿಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿಯ ಜೊತೆಗೆ ಬಂದು ಮತದಾನ ಮಾಡಿದರು.ಈ ವೇಳೆ ಮಾಧ್ಯಮದವರು ಮಾತ್ನಾಡಿಸಲು ಪ್ರಯತ್ನಿಸಿದರು ಎಲ್ಲರಿಗೂ ಧನ್ಯವಾದ ಅಂತಾ ಹೇಳಿ ನಡೆದರು.

ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಅರಬೈಲ್ ಮತಗಟ್ಟೆಗೆ ಪತ್ನಿಯ ಜೊತೆಯಲ್ಲಿ ಬಂದು ಮತದಾನ ಮಾಡಿದ್ದರು.ಇದನ್ನೂ ಮೊದಲು ಅವರ ಪುತ್ರ ವಿವೇಕ ಹೆಬ್ಬಾರ್ ಹಾಗೂ ಅವರ ಪತ್ನಿ ಜೊತೆ ಪ್ರತ್ಯೇಕವಾಗಿ ಬಂದು ಮತದಾನ ಮಾಡಿದ್ದರು. ತಂದೆ ಹಾಗೂ ಮಗ ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿ ಇರುವ ಕಾರಣ ಅವರು ಪ್ರತ್ಯೇಕವಾಗಿಯೇ ಮತಗಟ್ಟೆಗೆ ಬಂದು ಮತದಾನ ಮಾಡಿದರು..