ವಸಂತ ಋತು ಯಾವ ರೀತಿಯಲ್ಲಿ ಋತುಗಳ ರಾಜ ಎನಿಸಿರುವನೋ ಅದೇ ರೀತಿ ಮಾಸಗಳಲ್ಲಿ ಶ್ರಾವಣ ಮಾಸ ಶ್ರೇಷ್ಠವಾಗಿ ಸಂಭ್ರಮ ಸಡಗರದಿಂದ ಕೂಡಿದ್ದು ನಾಡಿನ ಆಸ್ತಿಕರಿಗೆ ಪೂಜನೀಯವಾಗಿದೆ.
ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಭಕ್ತಿಯೋಗದ ಬಗ್ಗೆ ಹೀಗೆ ಹೇಳಿದ್ದುಂಟು..
ನನ್ನ ಕೃಪೆಗೆ ಪಾತ್ರರಾಗಲು ಭಕ್ತಿ ಯೋಗವು ಸರಳವಾದ ಮಾರ್ಗವಾಗಿದೆ. ಯಾರು ನನ್ನನ್ನು ನೆನೆಸುತ್ತಾ ಶ್ರದ್ಧಾ ಭಕ್ತಿಯಿಂದ ಕರ್ಮ ಮಾಡುವರು ಅವರೇ ನಿಜವಾದ ಶ್ರೇಷ್ಠರು. ಹಾಗೆಯೇ ಧ್ಯಾನಯೋಗದಲ್ಲಿಯೂ ಅವರು ನನ್ನನ್ನೇ ಸೇರುವರು.
ದೇವತೆಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಆದ್ದರಿಂದ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಶಿವನ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರಿಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ಶ್ರವಣ ಅಂದರೆ (ಆಲಿಸು) ಕೇಳುವುದು. ಸರ್ವಶ್ರೋತಗಳ ಶ್ರವಣೇಂದ್ರೀಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೇ ಶ್ರಾವಣ. ಇದು ಮುಕ್ತಿಯ ಸಾಮ್ರಾಜ್ಯ ವಾಗಿದ್ದು, ಭಕ್ತರನ್ನು ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ.
ಈ ಮಾಸದಲ್ಲಿ ಧರ್ಮಾಚರಣೆಯ ವಿಧಿ-ವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜಾನುಷ್ಠಾನ, ಪಾರಾಯಣ, ಪುರಾಣ-ಶಾಸ್ತ್ರಗಳ ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಪುಣ್ಯ-ಕ್ಷೇತ್ರಗಳ ದರ್ಶನ, ಹೋಮ-ಹವನ ಮಾಡಿದರೆ ಅತ್ಯಂತ ಶೀಘ್ರಫಲ ಪ್ರಾಪ್ತಿಯಾಗುವುದು.
ನಾಗ_ಪಂಚಮಿ ಹಬ್ಬವು ಭಾತೃತ್ವದ ಭಾವೈಕ್ಯತೆ ಸಂಕೇತವಾಗಿದೆ.ಎಲ್ಲಾ ವರ್ಗದ ಜನರು ಶೃದ್ಧಾಭಕ್ತಿಯಿಂದ ಪೂಜಿಸುವರು. ಭಕ್ತಿ ಯೊಂದಿಗೆ ಭಯ ಕೂಡ ಅಡಗಿರುವುದು. ಮನೆಯಲ್ಲಿ, ಊರ ದೇವಸ್ಥಾನದ ಅಶ್ವತ್ಥ ಮರದಡಿಯಲ್ಲಿ ಶಿಲೆಯ ನಾಗದೇವತೆ ಅಥವಾ ಹುತ್ತಕ್ಕೆ ಹಾಲೆರೆದು ಪೂಜಿಸುವುದುಂಟು.
ನಾಗಸರ್ಪಗಳ ದೇಲಕುಲ ಶೃಂಗಂ
ಸರ್ಪೋ ದೇವನಾಂಚ ವಾಸುಕಿ
ಕಂಠ ಆಭರಣಂ ಚ ನೀಲಕಂಠಂ
ಶಯನೋ ವೈಕುಂಠದಾತಂ
ಶೇಷ ಸಹಸ್ರ ರೂಪಂ
ನಾಗರಾಜೋ ಪುಣ್ಯವಂದಿತಂ.
ಈ ಶ್ಲೋಕದಲ್ಲಿ ಸಮಸ್ತ ಸರ್ಪಕುಲದ ಕಿರು ಪರಿಚಯವಿದ್ದು ನಾಗಸರ್ಪವನ್ನು ದೇವಕುಲ ಶೃಂಗ ಎಂದು ಕರೆಯುವರು. ಸರ್ಪಗಳಲ್ಲಿ ಪರಮಾತ್ಮನ ಕೃಪೆಗೆ ಪಾತ್ರರಾಗಿರುವ ‘ವಾಸುಕಿ’ಯು ಪುರಾಣ ಪ್ರಸಿದ್ಧವಾಗಿದೆ. ಅನಾದಿಕಾಲದಿಂದಲೂ ನಾಗಸರ್ಪವನ್ನು ದೇವರು ಎಂದು ಪೂಜ್ಯ ಭಾವನೆಯಿಂದ ಆರಾಧಿಸುತ್ತೇವೆ.
ಶಿವ ಮತ್ತು ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಸರ್ಪ ಕುಲಕ್ಕೆ ಸಲ್ಲಿಸಿದಂತೆ ಆಗುವುದು ಎಂಬ ಪ್ರತೀತಿ ಇದೆ. ಕಾರಣ ನೀಲಕಂಠನ ಕಂಠಾಭರಣವೇ ನಾಗಸರ್ಪ.
ನಾಗ ಪಂಚಮಿಯಂದು ನಾಗದೋಷ ಸರ್ಪದೋಷ ನಿವಾರಣಾರ್ಥಕವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತು ಹಲವಾರು ಪೂಜಾ ವಿಧಿ_ವಿಧಾನಗಳೊಂದಿಗೆ ಅಷ್ಟೇ ಶೃದ್ಧಾಭಕ್ತಿಯಿಂದ ಪೂಜಿಸುವುದುಂಟು. ಇನ್ನು ಪಂಚಮಿ ದಿವಸ ಹಬೆಯಲ್ಲಿ ಬೇಯಿಸಿದ ಸಿಹಿ ತಿಂಡಿ, ಕಡಬು, ಸುಳಿ ರೊಟ್ಟಿ (ಕೈ_ಮುಗಿಯುವ ರೊಟ್ಟಿ) ಮಾಡಿ ಹಂಚುವರು.
ಪುಣ್ಯ ಸಂಪಾದನೆಗೆ ಶ್ರಾವಣ ಮಾಸವು ತುಂಬಾ ಉತ್ತಮವಾದ ಸಮಯವಾಗಿದ್ದು ಶಿವನ ಆರಾಧನೆಯಷ್ಟೇ ಗುರುವಿನ ಪೂಜೆಗೂ ವಿಶೇಷ ಪ್ರಾಶಸ್ತ್ಯ ಉಂಟು.
ಕು. ಜಿ… ✍️
ಇದನ್ನೂ ಓದಿ: ನೇತ್ರಾವತಿ ದಡದಲ್ಲಿ ಶವದ ರಹಸ್ಯ : ಧರ್ಮಸ್ಥಳ ನಡುಗಿಸಿದ SIT ಮಹಜರು.!