ಸುದ್ದಿಬಿಂದು ಬ್ಯುರೋ ವರದಿ
ಕಾರವಾರ: ಸಾಮಾನ್ಯವಾಗಿ ದೇವರಿಗ, ಹಣ್ಣು,ಹಂಪಲು, ಹಾಲು,ತುಪ್ಪಗಳನ್ನ ಅಭಿಷೇಕ ಮಾಡಲಾಗುತ್ತದೆ ಮತ್ತು ತುಪ್ಪದ ದೀಪದಿಂದ ಆರತಿ ಮಾಡಲಾಗುತ್ತದೆ. ಆದರೆ, ಇಲ್ಲಿನ ದೇವರು ಇತರ ಎಲ್ಲಾ ದೇವರುಗಳಿಗಿಂತ ವಿಭಿನ್ನನಾಗಿದ್ದು, ಈ ದೇವರಿಗೆ ಮದ್ಯದ ಅಭಿಷೇಕ,ಸಿಗರೇಟ್‌ನಿಂದಲ್ಲೆ ಆರಂತಿ ಮಾಡಲಾಗುತ್ತದೆ.

ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೋಡಿಭಾಗದಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಖಾಪ್ರಿ ದೇವರ ಜಾತ್ರೆ ಉಳಿದೆಲ್ಲಾ ಜಾತ್ರೆಗಿಂತ ವಿಭಿನ್ನವಾಗಿದೆ.. ವರ್ಷಕ್ಕೆ ಒಂದು ಬಾರಿ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಭೇಟಿ ನೀಡಿ ಖಾಪ್ರಿ ದೇವರ ಪೂಜೆ ಸಲ್ಲಿಸುತ್ತಾರೆ. ಹರಕೆಯೊಂದಿಗೆ ಬರುವ ಭಕ್ತರು ಸಿಗರೇಟು ಮತ್ತು ಮೇಣದ ಬತ್ತಿಗಳೊಂದಿಗೆ ಆರತಿ ಮಾಡುತ್ತಾರೆ ಹಾಗೂ ಮದ್ಯದಿಂದ ಅಭಿಷೇಕ ಮಾಡುತ್ತಾರೆ.

ಕೆವಲ ಇದಷ್ಟೇ ಅಲ್ಲ, ದೇವರಿಗೆ ಕೋಳಿಯನ್ನು ಬಲಿ ಕೊಟ್ಟು ರಕ್ತವನ್ನು ಅರ್ಪಿಸುವ ಸಂಪ್ರದಾಯವೂ ಇದೆ. ಖಾಪ್ರಿ ದೇವರು ಶಕ್ತಿಯ ದೇವರಾಗಿದ್ದು. ಆದ್ದರಿಂದ, ಮನಸ್ಸಿನ ಇಚ್ಛೆಗಳನ್ನು ಪೂರೈಸಿಕೊಳ್ಳಲು ಈ ರೀತಿಯ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಖಾಪ್ರಿ ದೇವರು ಆಫ್ರಿಕಾದಿಂದ ಬಂದ ದೇವರೆಂಬ ನಂಬಿಕೆಯಿದೆ. ಸುಮಾರು 300 ವರ್ಷಗಳ ಹಿಂದೆ ಒಬ್ಬ ಆಫ್ರಿಕನ್ ನಾಗರಿಕ ಈ ಸ್ಥಳಕ್ಕೆ ಬಂದು ಈ ದೇವರ ಪೂಜೆ ಸಲ್ಲಿಸಿದ್ದರು. ನಂತರ ಅವರು ಕಾಣೆಯಾಗಿದ್ದರು.

ಆ ನಂತರ, ಪರಸಪ್ಪ ಕುಟುಂಬದವರು ಇದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ, ದೇವರ ಶಿಲೆ ಕಾಣಿಸಿಕೊಂಡಿತು. ದೇವರು ಕನಸಲ್ಲಿ ಬಂದು ಕೋಳಿ ಬಲಿಯನ್ನು ಅರ್ಪಿಸುವಂತೆ ಹೇಳಿದರು ಎಂಬ ಕತೆ ಇದೆ. ಹಾಗಾಗಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನ ಹೆದ್ದಾರಿಯೊಂದಿಗೆ ಸಂಪರ್ಕ ಹೊಂದಿದೆ. ಹೀಗಾಗಿ, ಇಲ್ಲಿ ಅಪಘಾತಗಳ ಸಂಖ್ಯೆಯೂ ಕಡಿಮೆ ಎಂದು ಹೇಳಲಾಗುತ್ತದೆ.

ಈ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೆ, ನೆರೆಹೊರೆಯ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ. ದೇವರಿಗೆ ವಿವಿಧ ಸೇವೆಗಳನ್ನು ಅರ್ಪಿಸುತ್ತಾರೆ. ಹೀಗೆಯೇ ಪ್ರತಿವರ್ಷ ಹಣ್ಣು-ಹೂವು, ಸರಾಯಿ, ಸಿಗರೇಟು ಮತ್ತು ಕೋಳಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇದರಿಂದ ಭಕ್ತರ ಮನಸ್ಸಿನ ಕೋರಿಕೆಗಳು ಪೂರೈಸಲಾಗುತ್ತವೆ ಎಂಬ ನಂಬಿಕೆ ಇದೆ.

ಒಟ್ಟಾರೆ, ಉತ್ತರ ಕನ್ನಡ ಜಿಲ್ಲೆ ವೈವಿಧ್ಯಮಯ ನೈಸರ್ಗಿಕ ಸಂಪತ್ತಿನ ಜೊತೆಗೆ ವಿಶಿಷ್ಟ ಮತ್ತು ವಿಶೇಷವಾದ ಜಾತ್ರೆಗಳಿಗೂ ಪ್ರಸಿದ್ಧವಾಗಿದೆ.

ಇದನ್ನೂ ಓದಿ